ರೌಡಿ ಸಂತೋಷ್ ಭೀಕರ ಕೊಲೆ

Spread the love

ಬೆಂಗಳೂರು,ಏ.30- ನಿರ್ಮಾಣ ಹಂತದ ಮನೆಯ ಟೆರೆಸ್ ಮೇಲೆ ಕುಳಿತಿದ್ದ ರೌಡಿಯೊಂದಿಗೆ ಜಗಳವಾಡಿದ ಆರೋಪಿಗಳು ಚಾಕುವಿನಿಂದ ಚುಚ್ಚಿ ರೌಡಿಯನ್ನು ಕೊಲೆ ಮಾಡಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಮ್ಮನಗರ, 5ನೇ ಕ್ರಾಸ್‍ನಲ್ಲಿ ರೌಡಿ ಸಂತೋಷ್(28) ಎಂಬಾತನ ಕೊಲೆಯಾಗಿದೆ. ಆತನ ಮೇಲೆ ವಿವಿಧ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಆರೋಪಿಗಳಿಗೂ ಮತ್ತು ಸಂತೋಷ್ ನಡುವೆ ಗಲಾಟೆ ನಡೆದು ಹೊಡೆದಾಟವಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಆಗಾಗ್ಗೆ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹೋಗುತ್ತಿದ್ದರು. ನಿನ್ನೆ ನ್ಯಾಯಾಲಯಕ್ಕೆ ಹೋಗಿದ್ದಾಗ ರಾಜೀ ಮಾಡಿಕೊಳ್ಳಬೇಕೆಂದು ಸಂತೋಷ್ ಹೇಳಿದಾಗ ಆರೋಪಿಗಳು ಒಪ್ಪಿಲ್ಲ. ಆ ವಿಚಾರವಾಗಿ ನಿನ್ನೆ ಮತ್ತೆ ಇವರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ನಾಗಮ್ಮ ನಗರದ 5ನೇ ಕ್ರಾಸ್‍ನಲ್ಲಿ ಸಂತೋಷ್ ಮನೆ ಕಟ್ಟಿಸುತ್ತಿದ್ದು, ರಾತ್ರಿ ನಿರ್ಮಾಣ ಹಂತದ ತನ್ನ ಮನೆಯ ಟೆರಸ್ ಮೇಲೆ ಕುಳಿತಿದ್ದನು. ಆ ವೇಳೆ ಆರೋಪಿಗಳಿ ಅಲ್ಲಿಗೆ ಹೋಗಿದ್ದು, ಇಬ್ಬರ ನಡುವೆ ಜಗಳವಾಗಿದೆ. ಆ ಸಂದರ್ಭದಲ್ಲಿ ಸಂತೋಷ್ ಬಳಿಯಿದ್ದ ಚಾಕುವನ್ನು ಆರೋಪಿಗಳು ಕಿತ್ತುಕೊಂಡು ತಲೆ, ಮುಖ, ಇನ್ನಿತರ ಏಳೆಂಟು ಕಡೆ ಚುಚ್ಚಿ ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡಿದ್ದ ಸಂತೋಷ್‍ನನ್ನು ತಕ್ಷಣ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾ 4.30ರ ಸುಮಾರಿನಲ್ಲಿ ಸಂತೋಷ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.  ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಪರಾರಿಯಾಗಿರುವ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ.

Facebook Comments