ಬೆಂಗಳೂರು, ಜ.16- ಗೃಹಲಕ್ಷ್ಮಿ ಯೋಜನೆಯಡಿ ಪ್ರತಿಕುಟುಂಬದ ಮಹಿಳೆಯರಿಗೆ ಪ್ರತಿತಿಂಗಳು ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ನಾ ನಾಯಕಿ ಸಮಾವೇಶದಲ್ಲಿ ಭರವಸೆಯ ಫಲಕವನ್ನು ಪ್ರಿಯಾಂಕಗಾಂಧಿ ಅನಾವರಣ ಮಾಡಿದರು.
ಕುಸು ಹುಟ್ಟುವ ಮೊದಲೇ ಕುಲಾವಿ ಎಂಬಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಹಿ ಮಾಡಿರುವ ಗೃಹಲಕ್ಷ್ಮೀ ಯೋಜನೆಯ ಚೆಕ್ ಅನ್ನು ಖಾತ್ರಿಗಾಗಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದರು.
ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಧಾನಸಭೆ, ಲೋಕಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಾನೂನು ಜಾರಿಗೆ ತರುವುದಾಗಿ ತಿಳಿಸಿದರು.
ನಾವು ಈ ಕಾರ್ಯಕ್ರಮ ಆಯೋಜಿಸಿದ ಮೇಲೆ ಬಿಜೆಪಿ ಸರ್ಕಾರ ದೊಡ್ಡ ಜಾಹಿರಾತು ಕೊಟ್ಟು ಮಹಿಳಾ ಸಬಲೀಕರಣ ಮಾಡುವುದಾಗಿ ಹೇಳಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದುಮೂರುವರೆ ವರ್ಷವಾಗಿದೆ. ಮಹಿಳೆಯರ ಪರವಾಗಿ ಒಂದೇ ಒಂದು ಕಾರ್ಯಕ್ರಮ ಮಾಡಲಿಲ್ಲ. 2018ರ ಚುನಾವಣಾ ಪ್ರಣಾಳಿಕೆಯಲ್ಲಿಮಹಿಳಾ ಸಂಬಂಧಿ 24 ಭರವಸೆ ನೀಡಿದ್ದರು.
ಅವುಗಳಲ್ಲಿ ಒಂದನ್ನೂ ಈಡೇರಿಸಲಿಲ್ಲ. ಬಿಜೆಪಿ ಮಹಿಳೆಯರು, ದಲಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿದೆ.ಮಹಿಳೆಯರ ಹಕ್ಕುಗಳನ್ನು ಧಮನ ಮಾಡಲು ನಿರಂತರವಾಗಿ ಯತ್ನಿಸುತ್ತಲೇ ಇದೆ ಎಂದರು.
ಮಹಿಳೆಯರ ಅಭಿವೃದ್ಧಿಯಾಗದೆ ಸಮಾಜ ಅಭಿವೃದ್ಧಿ ಸಾಧ್ಯವಿಲ್ಲ. ನೆಹರು ಕಾಲದಲ್ಲಿ ಹಿಂದು ವಿವಾಹ ಜಾಯ್ದೆ, ಆಸ್ತಿ ಹಕ್ಕು, ವರದಕ್ಷಿಣೆ ವಿರೋಧಿ ಕಾಯ್ದೆ ಸೇರಿ ಹಲವು ಮಸೂದೆಗಳನ್ನು ಜಾರಿಗೆ ತಂದರು. ಮಹಿಳಾ ಸಾಕ್ಷರತೆ ಹೆಚ್ಚಾಗಲು ಕಾಂಗ್ರೆಸ್ ಕಾರಣ, ಉದ್ಯೋಗದಲ್ಲಿ, ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ಮೀಸಲಾತಿ ಸೇರಿದಂತೆ ಅನೇಕ ಸೌಲಭ್ಯ ಸಿಗಲು ಕಾಂಗ್ರಸ್ ಸರ್ಕಾರಗಳು ಕಾರಣ ಎಂದರು.
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ರೀಟಾ ಡಿಸೋಜಾ ಮಾತನಾಡಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ದೇಶವನ್ನು ಒಗ್ಗೂಡಿಸುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಪ್ರಿಯಾಂಕರ ನಾನು ಹೋರಾಟಬಲ್ಲೆ ಎಂಬ ಘೋಷಣೆ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ.
ಪ್ರಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವೆ ಹಾಗೂ ನಾ ನಾಯಕಿ ಅಭಿಯಾನದ ಅಧ್ಯಕ್ಷೆ ಉಮಾಶ್ರೀ, ಈ ಅಭಿಯಾನ ದೇಶದಲ್ಲೇ ಪ್ರಥಮವಾಗಿದೆ. ದೇಶ ಕಟ್ಟುವ ಸಾಮರ್ಥ್ಯ ಇರುವ ಮಹಿಳಾ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಲು ನಾ ನಾಯಕಿ ಅಭಿಯಾನ ಸೂಕ್ತ ವೇದಿಕೆಯಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು, ಬಿಜೆಪಿ ಸರ್ಕಾರದ ಭ್ರಷ್ಟಚಾರ, ಮಹಿಳಾ ದೌರ್ಜನ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಹಿಳೆಯರು ಗ್ರಾಮೀಣಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಕರೆ ನೀಡಿದರು.
ಶಾಸಕಿ ಸೌಮ್ಯರೆಡ್ಡಿ, ಮಹಿಳೆಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಸಕಿ ರೂಪಾ ಶಶೀಧರ್, ಮಹಿಳಾ ಬೇಡಿಕೆಗಳ ಪ್ರಸ್ತಾವನೆ ಮಂಡಿಸಿದರು.