RSS ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಚಿವ ರೋಷನ್ ಬೇಗ್ ಸುಫಾರಿ..!
ಬೆಂಗಳೂರು, ನ.4– ಶಿವಾಜಿನಗರದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಸುಫಾರಿ ಕೊಟ್ಟು ರುದ್ರೇಶ್ ಕೊಲೆ ಮಾಡಿಸಿದ್ದಾರೆ ಎಂದು ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಶೋಭಾ ಅವರ ಆರೋಪ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಸಚಿವ ರೋಷನ್ ಬೇಗ್ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ನಡುವೆ ರುದ್ರೇಶ್ ಅವರ ಪತ್ನಿ ವಿದ್ಯಾವತಿ ಅವರು ಶೋಭಾ ಕರಂದ್ಲಾಜೆ ಅವರು ಮಾಡಿರುವ ಆರೋಪದ ಕುರಿತು ಕೇಂದ್ರ ಸರ್ಕಾರದ ಸಂಸ್ಥೆಯಿಂದ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಶೋಭಾ ಕರಂದ್ಲಾಜೆ, ರುದ್ರೇಶ್ ಹತ್ಯೆಯ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಶಿವಾಜಿನಗರದಲ್ಲಿ ಬಿಜೆಪಿ ಬೆಳವಣಿಗೆಯನ್ನು ಸಹಿಸದೆ ರುದ್ರೇಶ್ ಹತ್ಯೆ ಮಾಡಲಾಗಿದೆ. ರೋಷನ್ ಬೇಗ್ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಶಾಮೀಲಾಗಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ತನಿಖೆ ನಡೆಸಿದರೆ, ರೋಷನ್ ಬೇಗ್ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ. ಕೊಲೆಯಲ್ಲಿ ರೋಷನ್ ಬೇಗ್ ಕೈವಾಡ ಇರುವ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಅನುಮಾನ ಹುಟ್ಟಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ, ಆರ್ಎಸ್ಎಸ್ ಕಾರ್ಯಕರ್ತರಿಗೆ ಗುಮಾನಿ ಇದೆ. ಜನ ಸಾಮಾನ್ಯರು ಈ ಬಗ್ಗೆ ಮಾತನಾಡಲಾಂಭಿಸಿದ್ದಾರೆ ಎಂದು ಅವರು ಹೇಳಿದರು.
ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ಒತ್ತಡ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ್ ಮತ್ತು ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಸಡಿಲ ಮಾಡುವಂತೆ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ರಾಜ್ಯದಲ್ಲಿ ರಾಜಕೀಯ ದ್ವೇಷಕ್ಕಾಗಿ ಸರ್ಕಾರಿ ಪ್ರಾಯೋಜಿತ ಕೊಲೆಗಳಾಗುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು, ರುದ್ರೇಶ್ ಕೊಲೆ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ಮಂಗಳೂರಿನಿಂದ ಬಂದಿರುವ ಶೋಭಾ ಕರಂದ್ಲಾಜೆ ಅವರು ಪ್ರಚಾರಕ್ಕಾಗಿ ಇಂತಹ ಕೀಳು ಮಟ್ಟದ ಆರೋಪ ಮಾಡಿದ್ದಾರೆ. ನನ್ನ ಬಗ್ಗೆ ಶಿವಾಜಿನಗರದಲ್ಲಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರಿಗೆ ಚೆನ್ನಾಗಿ ಗೋತ್ತಿದೆ. ಸ್ಥಳೀಯ ಸೋಮೇಶ್ವರ ದೇವಸ್ಥಾನದ ಪೂಜಾರಿ ಸೇರಿ ಕ್ಷೇತ್ರದಲ್ಲಿರುವ ಎಲ್ಲಾ ದೇವಸ್ಥಾನಗಳ ಪೂಜಾರಿಗಳಲ್ಲೂ ನನ್ನ ಬಗ್ಗೆ ಕೇಳಲಿ. ಇಲ್ಲಿ ಬಂದು ಭಾಷಣ ಮಾಡಿ ಕೋಮುಗಲಭೆ ಸೃಷ್ಠಿಸಲು ಶೋಭಾ ಕರಂದ್ಲಾಜೆ ಮತ್ತಿತರರು ಪ್ರಯತ್ನಿಸಿದರು ಎಂದು ತಿರುಗೇಟು ನೀಡಿದ್ದಾರೆ.
ನಾನು ಶಿವಾಜಿನಗರದ ಬೀದಿಗಳಲ್ಲಿ ಆಡಿ ಬೆಳೆದವನು. ಎಂದಿಗೂ ಯಾರ ಜೊತೆಯೂ ಪೈಪೋಟಿ ರಾಜಕಾರಣ ಮಾಡಿಲ್ಲ. ಇನ್ನೂ ರುದ್ರೇಶ್ ಬೆಳೆಯುತ್ತಿದ್ದ ಹುಡುಗ ಅವನನ್ನು ಸುಫಾರಿ ಕೊಟ್ಟು ಕೊಲ್ಲಿಸುವ ಅಗತ್ಯ ಏನಿತ್ತು. ವೈಯಕ್ತಿಕವಾಗಿ ರುದ್ರೇಶ್ ಒಳ್ಳೆಯವರು. ಅವರೊಂದಿಗೆ ನನಗೆ ಯಾವುದೇ ದ್ವೇಷ ಇರಲಿಲ್ಲ ಎಂದಿದ್ದಾರೆ. ರುದ್ರೇಶ್ ಕೊಲೆ ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ. ಆರೋಪ ಮಾಡಿರುವ ಶೋಭಾ ಕರಂದ್ಲಾಜೆ ಅವರು ನನ್ನ ವಿರುದ್ಧ ಸಿಬಿಐ ಅಥವಾ ಎನ್ಐಎ ಸೇರಿ ಯಾವುದೇ ತನಿಖೆ ಮಾಡಿಸಿದರೂ ಅದನ್ನು ಎದುರಿಸಲು ನಾನು ಸಿದ್ಧ ಎಂದು ಪ್ರತಿಸವಾಲು ಹಾಕಿರುವ ಸಚಿವರು, ಬಿಬಿಎಂಪಿ ಚುನಾವಣೆಯಲ್ಲಿ ಎಂಐಎಂನ್ನು ಬೆಂಗಳೂರಿಗೆ ಕಾಲಿಡಲು ಬಿಡದೆ ತಡೆದವನು ನಾನು. ಎಸ್ಡಿಪಿಐ, ಪಿಎಫ್ಐನಂತಹ ಸಂಘಟನೆಗಳಿಗೆ ನನ್ನ ಬೆಂಬಲ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ಶೋಭಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಕೀಲರ ಜೊತೆ ಚರ್ಚಿಸುವುದಾಗಿ ಹೇಳಿರುವ ಅವರು, ರಾಜಕೀಯಕ್ಕೆ ಆರೋಪ ಮಾಡುವವರಿಗೆ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿರುವ ರುದ್ರೇಶ್ ಅವರ ಪತ್ನಿ ವಿದ್ಯಾವತಿ ಅವರು, ಶೋಭಾ ಕರಂದ್ಲಾಜೆ ಅವರ ಆರೋಪದ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ. ನಾನು ಯಾರ ವಿರುದ್ಧವೂ ವೈಯಕ್ತಿಕ ಆರೋಪ ಮಾಡುವುದಿಲ್ಲ. ಆದರೆ ನನ್ನ ಪತಿ ಹಿಂದೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು ಆದರೆ ಸಣ್ಣಪುಟ್ಟ ಕಾರಣಗಳಿಂದ ಹಿಂಪಡೆದಿದ್ದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆ ಹೊಂದಿದ್ದರು ಎಂದು ಹೇಳಿದ್ದಾರೆ.
ರಾಜೀನಾಮೆಗೆ ಒತ್ತಾಯ:
ರುದ್ರೇಶ್ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ರೋಷನ್ ಬೇಗ್ ಮೇಲೆ ಆರೋಪ ಮಾಡಿರುವ ಬಿಜೆಪಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಈ ಕುರಿತು ಬೀದಿಗಿಳಿದು ಹೋರಾಟ ನಡೆಸಲು ಬಿಜೆಪಿ ಸಿದ್ದತೆ ನಡೆಸಿದೆ. ಮುಂದೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಇದೇ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಪ್ರತಿಭಟನೆ ನಡೆಸಿ ರಾಜಿನಾಮೆಗೆ ಪಟ್ಟು ಹಿಡಿಯಲು ಬಿಜೆಪಿ ನಿರ್ಧರಿಸಿದೆ. ಹಿಂದೆ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ದೋಷಿ ಎಂದು ಆರೋಪಿಸಿ ಹೋರಾಟ ನಡೆಸಿದ್ದ ಬಿಜೆಪಿ ಅವರ ರಾಜಿನಾಮೆ ಕೊಡುವ ಪರಿಸ್ಥಿತಿ ನಿರ್ಮಿಸಿತ್ತು. ಕಳೆದ ಅಧಿವೇಶನದಲ್ಲಿ ಜಾರ್ಜ್ ಪ್ರಕರಣವೇ ಹೆಚ್ಚು ಚರ್ಚೆಯಾಗಿತ್ತು. ಈಗ ರೋಷನ್ ಬೇಗ್ ಮೇಲೆ ಆರೋಪ ಮಾಡಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ.