ಜಬಲ್ಪುರ (ಮಧ್ಯಪ್ರದೇಶ), ನ.2- ಯಾರೋ ಬಯಸುತ್ತಾರೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಲು ಸಾಧ್ಯವಿಲ್ಲ. ಅಂತಹ ಬೇಡಿಕೆ ಇಡುವವರು ಹಿಂದಿನ ಅನುಭವಗಳಿಂದ ಕಲಿಯಬೇಕು ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್‌ಎಸ್) ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು.
ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದ ಖರ್ಗೆ, ದೇಶದಲ್ಲಿ ಹೆಚ್ಚಿನ ಸಮಸ್ಯೆಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸುತ್ತಿರುವುದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ. ಹೀಗಾಗಿ ಈ ಸಂಘಟನೆಯನ್ನು ನಿಷೇಧಿಸಬೇಕು. ಪ್ರಧಾನಿ ನರೇಂದ್ರಮೋದಿಯವರು ವಲ್ಲಭಭಾಯಿ ಪಟೇಲ್ ಮಂಡಿಸಿದ ಅಭಿಪ್ರಾಯಗಳನ್ನು ಗೌರವಿಸುವುದು ನಿಜವಾದರೆ, ಆರ್‌ಎಸ್‌ಎಸ್ ಅನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದರು.
ಜಬಲ್ಪುರದಲ್ಲಿ ನಡೆದ ಮೂರು ದಿನಗಳ ಆರ್‌ಎಎಸ್‌ನ ಅಖಿಲ ಭಾರತ ಕಾರ್ಯಕಾರಿಣಿ ಸಭೆಯ ಮುಕ್ತಾಯದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಮೂರು ಬಾರಿ ಇಂತಹ ಪ್ರಯತ್ನಗಳು ನಡೆದಿವೆ. ಆಗ ಸಮಾಜ ಏನು ಹೇಳಿತು? ನ್ಯಾಯಾಲಯ ಏನು ಹೇಳಿತು? ಇಷ್ಟೆಲ್ಲಾ ಇದ್ದರೂ, ಸಂಘದ ಕೆಲಸ ಬೆಳೆಯುತ್ತಲೇ ಇದೆ. ನಿಷೇಧ ಹೇರಲು ಸರಿಯಾದ ಕಾರಣಗಳಿರಬೇಕು ಎಂದಿದ್ದಾರೆ.
ಆರ್‌ಎಸ್‌ಎಸ್ ನಿಷೇಧಿಸುವ ಹೇಳಿಕೆ ಈಗಿನದ್ದಲ್ಲ, ಹಳೆಯದು. ಈ ಹಿಂದೆಯೂ ಸಂಘವನ್ನು ನಿಷೇಧಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಪ್ರತಿ ಬಾರಿಯೂ ಅದು ಬಲವಾಗಿ ನಿಂತಿದೆ. ಸಂಘವು ರಾಜಕೀಯಕ್ಕಾಗಿ ಅಲ್ಲ, ಸಮಾಜಕ್ಕಾಗಿ ಕೆಲಸ ಮಾಡುತ್ತದೆ. ಸಂಘವು ತನ್ನ ಆದರ್ಶಗಳ ಮೂಲಕ ದೃಢವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.
ಖರ್ಗೆಯವರು ಹಿಂದಿನ ಅನುಭವಗಳಿಂದ ಪಾಠ ಕಲಿಯಬೇಕು. ಸಮಾಜವು ಸಂಘವನ್ನು ಒಪ್ಪಿಕೊಂಡಿದೆ ಮತ್ತು ನ್ಯಾಯಾಂಗವು ಸಹ ಈ ವಿಷಯದ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಿದೆ. ಯಾವುದೇ ಮಹತ್ತರ ಕಾರಣವಿಲ್ಲದೆ ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂಘವು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತವಾಗಿದೆ. ಯಾವುದೇ ನಿಷೇಧದ ಹಿಂದೆ ಒಂದು ಕಾರಣವಿರಬೇಕು. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡು ಸಾಧಿಸುವುದೇನಿದೆ? ಸಾರ್ವಜನಿಕರು ಈಗಾಗಲೇ ನಮನ್ನು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ ವಿಶೇಷವಾಗಿ ಪಂಜಾಬ್ ಮತ್ತು ಸಿಖ್ ಸಮುದಾಯದಲ್ಲಿ ಧಾರ್ಮಿಕ ಮತಾಂತರದ ಘಟನೆಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಸಂಘವು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ನಮ ಗುರಿ ಯಾರ ವಿರುದ್ಧವೂ ಅಲ್ಲ, ಆದರೆ ವಂಚನೆ ಅಥವಾ ದುರಾಸೆಯಿಂದ ಮತಾಂತರಗೊಂಡವರನ್ನು ಅವರ ಮೂಲ ಧರ್ಮಕ್ಕೆ ಮರಳಿ ತರುವುದು ನಮ ಉದ್ದೇಶ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಸಭೆಯಲ್ಲಿ ಬಿಹಾರ ಅಥವಾ ಪಶ್ಚಿಮಬಂಗಾಳ ಚುನಾವಣೆಗಳ ಬಗ್ಗೆ ಚರ್ಚಿಸಲಾಗಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂಬರುವ ಬಿಹಾರ ಚುನಾವಣೆಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಆದರೆ ಜನರು ಜಾತಿ ಅಥವಾ ಹಣದ ಆಧಾರದ ಮೇಲೆ ಮತಚಲಾಯಿಸದೆ, ರಾಷ್ಟ್ರ ಮತ್ತು ಸಮಾಜಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂಬುದು ಸಂಘದ ನಿಲುವು. ಈ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲು ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಪಶ್ಚಿಮಬಂಗಾಳದ ಬಗ್ಗೆ ಹೇಳುವುದಾದರೆ ಈ ಸಭೆಯಲ್ಲಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿಲ್ಲ, ಆದರೆ ಅದರ ಬಗ್ಗೆ ಮೊದಲೇ ಚರ್ಚೆ ನಡೆದಿತ್ತು. ಅಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹಿಂದಿನ ಸಭೆಯಲ್ಲಿ ಸಂಘದ ನಿರ್ಣಯ ಅಂಗೀಕರಿಸಲಾಗಿತ್ತು. ಸಂಘದ ಕೆಲಸವನ್ನು ರಾಜ್ಯದಲ್ಲಿ ವ್ಯಾಪಕವಾಗಿ ವಿಸ್ತರಿಸಲಾಗುತ್ತಿದೆ. ಆದರೆ, ಕಳೆದ ಚುನಾವಣೆಗಳ ನಂತರ ರಾಜಕೀಯ ನಾಯಕತ್ವಕ್ಕಾಗಿ ಅಲ್ಲಿನ ಮುಖ್ಯಮಂತ್ರಿ ದ್ವೇಷ ಹರಡುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೊಸಬಾಳೆ ಆರೋಪಿಸಿದ್ದಾರೆ.
