ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಆ.17- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ರಾತ್ರಿ ಏಕಾಏಕಿ ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ಕಡೆ ನಾಯಕತ್ವ ಬದಲಾವಣೆಯ ಗುಸುಗುಸು, ಮತ್ತೊಂದು ಕಡೆ ಸರ್ಕಾರ ನಡೆಯುತ್ತಿಲ್ಲ. ಹೇಗೋ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಅವರ ಹೇಳಿಕೆ, ಕರಾವಳಿ ನಂತರ ಶಿವಮೊಗ್ಗಕ್ಕೆ ಹಬ್ಬಿರುವ ಕೋಮುಗಲಭೆ, ಸರ್ಕಾರದ ಮೇಲೆ ಪ್ರತಿಪಕ್ಷಗಳ ವಾಗ್ದಾಳಿ ಸೇರಿದಂತೆ ಕೆಲವು ಮಹತ್ವ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪದೇ ಪದೇ ಕೋಮುಗಲಭೆಗಳು ಸಂಭವಿಸುತ್ತಲೇ ಇದೆ. ಶಿವಮೊಗ್ಗದಲ್ಲಿ ಹರ್ಷ, ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು, ಶಿವಮೊಗ್ಗದಲ್ಲಿ ಮತ್ತೆ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ಚಾಕು ಇರಿಯಲಾಗಿದೆ.

ಈ ರೀತಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಕೆಲ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಡೆ ಹೆಚ್ಚಿನ ಗಮನ ಕೊಡಿ ಎಂದು ಸಂಘ ಪರಿವಾರದ ನಾಯಕರು ಸಿಎಂಗೆ ಸಲಹೆ ಮಾಡಿದ್ದಾರೆ.

ಪದೇಪದೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದರೆ ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಉಂಟಾಗುತ್ತದೆ. ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ಇಡಬೇಕೆಂದು ಕಿವಿಮಾತು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬೊಮ್ಮಾಯಿ ಅವರು, ಕಾನೂನು ಮತ್ತು ಸುವ್ಯವಸ್ಥೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ 28ರಂದು ದೊಡ್ಡಬಳ್ಳಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಜನೋತ್ಸವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.

Articles You Might Like

Share This Article