ತುಮಕೂರು, ಜು.27- ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ಹೊರತೆಗೆದು ಶವಪರೀಕ್ಷೆಗೆ ಕಳುಹಿಸಿರುವ ಘಟನೆ ತುರುವೇಕೆರೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ನಡೆದಿದೆ. ಆರ್‌ಟಿಐ ಕಾರ್ಯಕರ್ತ ಬೀಚನಹಳ್ಳಿ ಕಿರಣ್ ಕುಮಾರ್ ಮೇ 13ರಂದು ಶೌಚಾಲಯಕ್ಕೆ ಹೋಗಿ ಬರುವಾಗ ಹೃದಯಾ ಘಾತಕ್ಕೆ ಒಳಗಾಗಿದ್ದರು ಎಂದು ಸಂಬಂಧಿಕರೆಲ್ಲ ಸೇರಿ ಶವಸಂಸ್ಕಾರವನ್ನು ಮಾಡಿದ್ದರು.
ಮೃತ ಕಿರಣ್ ಅವರ ತಮ್ಮನ ಮಗ ವೈಭವ್ ತಮ್ಮ ದೊಡ್ಡಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕಳೆದ 15 ದಿನದ ಹಿಂದೆ ದಂಡಿನಶಿವರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಉಪ
ವಿಭಾಗಾಧಿಕಾರಿ ಸಿ.ಆರ್.ಕಲ್ಪಶ್ರೀ ಸಮ್ಮುಖದಲ್ಲಿ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಆಸ್ತಿ ಕಲಹ: ಕಿರಣ್ ಕುಮಾರ್ ಆರ್‌ಟಿಐ ಕಾರ್ಯಕರ್ತರಾಗಿ, ವ್ಯವಸಾಯ ಮಾಡುತ್ತಿದ್ದು, ಆಸ್ತಿ ಹಂಚಿಕೆ ವಿಚಾರಕ್ಕೆ ಮನೆಯಲ್ಲಿ ಕಲಹವಿತ್ತು ಎಂಬ ಮಾತುಗಳು ಕೇಳಿಬಂದಿದ್ದು, ಪತ್ನಿಯಿಂದ ದೂರವಿದ್ದ ಕಿರಣ್ ಪ್ರತ್ಯೇಕವಾಗಿ ವಾಸವಿದ್ದು, ಸಾವನ್ನಪ್ಪಿದ್ದ ದಿನವೇ ಸಾಕಷ್ಟು ಅನುಮಾನಗಳನ್ನು ಸಂಬಂಕರು ಹಾಗೂ ಸ್ನೇಹಿತರು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈಗ ಕುಟುಂಬಸ್ಥರೇ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಸಮಗ್ರ ತನಿಖೆ ನಡೆಸಬೇಕು ಎಂಬ ಮಾತುಗಳು ಕೇಳಿಬಂದಿವೆ. ಶವ ಹೊರ ತೆಗೆಯುವ ವೇಳೆ ತಹಸೀಲ್ದಾರ್ ರೇಣುಕುಮಾರ್, ಪಿಎಸ್‍ಐ ರಾಮಚಂದ್ರಪ್ಪ, ಆರ್‍ಐ ಗಂಗಾಧರಪ್ಪ ಸೇರಿದಂತೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.