ಕ್ಯಿವ್,ಮಾ.3- ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಬಹುತೇಕ ನಗರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ಯುದ್ಧ ಗೆಲ್ಲುವತ್ತ ದಾಪುಗಾಲು ಇಟ್ಟಿದೆ. ಉಕ್ರೇನ್ ಅಧ್ಯಕ್ಷ ವೋಲ್ಡೊಮಿರ್ ಝೆಲೆನ್ಸ್ಕಿ ಮತ್ತು ಸ್ಥಳೀಯ ಸೇನೆಯ ತೀವ್ರ ಪ್ರತಿರೋಧದ ನಡುವೆ ರಷ್ಯಾ ಪಡೆ ಹಂತ ಹಂತವಾಗಿ ಮುಂದುವರೆಯುತ್ತಿದ್ದು, ನಿನ್ನೆ ಖೆರೋಸನ್ ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಇಂದು ಖಾರ್ಕಿವ್ ನಗರವನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸನ್ನಹದಲ್ಲಿದೆ. ಜತೆಗೆ ರಾಜಧಾನಿ ಕ್ಯಿವ್ ಒಳಗೊಂಡಂತೆ ಹಲವಾರು ನಗರಗಳ ಸುತ್ತ ರಷ್ಯಾ ಸೇನಾ ಪಡೆ ಸುತ್ತುವರೆದಿದ್ದು, ಯುದ್ಧ ನಿರ್ಣಾಯಕ ಹಂತ ತಲುಪಿದೆ. ಎಂಟು ದಿನಗಳ ಸತತ ಯುದ್ಧದಲ್ಲಿ ಮಾಸ್ಕೋ, ಖೆರೋಸನ್ ನಗರವನ್ನೂ ಆಕ್ರಮಿಸಿದ್ದು, ಸಾವಿರಾರು ಸಾವುನೋವುಗಳು ಸಂಭವಿಸಿದೆ. 1945ರಲ್ಲಿ ನಡೆದ ಭೀಕರ ಯುದ್ಧದಲ್ಲಿ 8,70,000 ಮಂದಿ ದೇಶ ತೊರೆದಿದ್ದರು. ಈಗ ಸುಮಾರು 10ಲಕ್ಷಕ್ಕೂ ಹೆಚ್ಚು ಮಂದು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.
ಕಪ್ಪು ಸಮುದ್ರದ ಭಾಗದಲ್ಲಿದ್ದ ಖೆರೊಸನ್‍ನ ಬಂದರನ್ನು ರಷ್ಯಾ ಪಡೆಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಅಲ್ಲಿನ ಮೇಯರ್ ಲೋಗರ್ ಕೋಲ್ಯೋಖೆಹವ್ ಅವರು ರಷ್ಯಾ ಸಶಸ್ತ್ರ ಪಡೆಗಳು ನಗರಕ್ಕೆ ಬಂದಿದ್ದು, ನಮ್ಮ ಮೇಲೆ ಒತ್ತಡ ಹೇರುತ್ತಿವೆ. ನಾವು ನಿರಾಯುಧರಾಗಿದ್ದೇವೆ ಮತ್ತು ಶಾಂತಿಯನ್ನು ಬಯಸುತ್ತಿದ್ದೇವೆ. ಹಾಗಾಗಿ ಯಾವುದೇ ಆಕ್ರಮಣ ಮಾಡುತ್ತಿಲ್ಲ. ನಾನು ಈಗ ರಷ್ಯನ್ನರ ಬಳಿ ಜನರನ್ನು ಕೊಲ್ಲಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ರಷ್ಯಾ ತನ್ನ ಪಡೆಯಲ್ಲಿನ ಸಾವು-ನೋವುಗಳ ಬಗ್ಗೆ ಅಕೃತ ಮಾಹಿತಿ ನೀಡಿದ್ದು, 498 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಿಯೋಗ ಉಕ್ರೇನ್‍ನಲ್ಲಿ 752 ಮಂದಿ ಹತ್ಯೆಯಾಗಿದೆ ಎಂದು ತಿಳಿಸಿದೆ. ರಷ್ಯಾದ 6 ಸಾವಿರ ಮಂದಿ ಸೈನಿಕರನ್ನು ಉಕ್ರೇನ್ ಹತ್ಯೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದೆ.
