Russia-Ukraine Conflict : ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

Social Share

ಕ್ಯಿವ್, ಮಾ.5- ರಷ್ಯಾ-ಉಕ್ರೇನ್ ನಡುವಿನ ಯುದ್ಧ 10ನೇ ದಿನಕ್ಕೆ ತಲುಪಿದ್ದು, ಸಂತ್ರಸ್ತ ಭಾಗದ ಕೆಲವು ನಗರಗಳಿಂದ ಜನರನ್ನು ಸ್ಥಳಾಂತರಿಸಲು ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. ಜೊತೆಗೆ ಪೂರ್ಣಪ್ರಮಾಣದ ಆಕ್ರಮಣಕ್ಕೆ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ನಿರಂತರ ದಾಳಿಯಿಂದ ಉಕ್ರೇನ್ ತತ್ತರಿಸಿದ್ದು, ಹತಾಶ ಸ್ಥಿತಿಗೆ ತಲುಪಿದೆ.
ಇಂದು ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ಮಾನವೀಯ ದೃಷ್ಟಿಯಿಂದ ಎರಡು ನಗರಗಳ ಮೇಲಿನ ದಾಳಿಯನ್ನು 8 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ. ರಷ್ಯಾದ ವಿದೇಶಾಂಗ ಸಚಿವರು ತಾತ್ಕಾಲಿಕ ಕದನ ವಿರಾಮವನ್ನು ಪ್ರಕಟಿಸಿದ್ದು, ಮಾಸ್ಕೋದ ಕಾಲಮಾನದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೂ ಮಾನವೀಯ ಕಾರಿಡಾರ್‍ಗೆ ಅವಕಾಶ ನೀಡಲಾಗಿದೆ. ಮರಿಯಾಪೋಲ್, ಒಲೊನೊಓಖಾ ನಗರಗಳಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕಿದೆ. ಕದನ ವಿರಾಮ ಪೂರ್ಣಗೊಂಡ ಬಳಿಕವೂ ನಗರಗಳಲ್ಲೇ ಉಳಿಯುವುದು ಅಪರಾಧವಾಗಲಿದೆ ಎಂದು ತಿಳಿಸಿದ್ದಾರೆ.
# ಜರ್ಝರಿತ ಉಕ್ರೇನ್:
ಈವರೆಗೂ ಉಕ್ರೇನ್‍ನ ಖೆರೋಸನ್ ನಗರವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ರಾಜಧಾನಿ ಕ್ಯಿವ್ ಮತ್ತು 2ನೇ ದೊಡ್ಡನಗರ ಖಾರ್ಕೀವ್‍ನಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು, ಸ್ಮಶಾನ ಸದೃಶ್ಯ ವಾತಾವರಣ ನಿರ್ಮಾಣವಾಗಿದೆ.
ಹಾದಿಬೀದಿಯಲ್ಲಿ ಮೃತದೇಹಗಳು ಸಿಗುತ್ತಿವೆ. ಕಟ್ಟಡಗಳು, ರಸ್ತೆಗಳು, ಮೂಲಸೌಕರ್ಯಗಳು ನಾಶವಾಗಿವೆ. ವಾಸ್ತವದಲ್ಲಿ ಉಕ್ರೇನ್‍ನ ಪರಿಸ್ಥಿತಿ ಘನಘೋರವಾಗಿದೆ. ಸುಮಾರು 500ಕ್ಕೂ ಹೆಚ್ಚು ಶೆಲ್ ದಾಳಿಗಳನ್ನು ರಷ್ಯಾ ನಡೆಸಿದ್ದು, ಉಕ್ರೇನ್‍ನ ಬಹುತೇಕ ನಗರಗಳು ಛಿದ್ರವಾಗಿವೆ.
ಜನವಸತಿ ಪ್ರದೇಶಗಳು ಧ್ವಂಸಗೊಂಡಿವೆ, ಬೆಂಕಿಯ ಕೆನ್ನಾಲಗೆ, ಭಸ್ಮವಾದ ಅವಶೇಷಗಳ ಹೊಗೆ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ. ಒಂದೆಡೆ ರಷ್ಯಾ ಜೊತೆ ಕಾದಾಡುತ್ತಲೇ ಹಾನಿಗೊಳಗಾಗಿರುವ ಪ್ರದೇಶಗಳ ಪುನರ್ವಸತಿಗೂ ಶ್ರಮಿಸುತ್ತಿದೆ. ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕ ಮಂಡಿಸಿದ ಪ್ರಸ್ತಾವನೆಗೆ ರಷ್ಯಾ ಬೆಲೆ ನೀಡಿಲ್ಲ. ಈ ನಡುವೆ ಟರ್ಕಿ ಸಂಧಾನದ ಮಧ್ಯಸ್ಥಿತಿಕೆ ವಹಿಸಲು ಮುಂದೆ ಬಂದಿದೆ. 10 ದಿನಗಳಿಗೆ ಕಾಲಟ್ಟಿರುವ ಯುದ್ಧ ಮತ್ತಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ.
ರಷ್ಯಾ ಪಡೆಗಳು ಮರಿಯುಪೋಲ್‍ಗೂ ನುಗ್ಗಿದ್ದು, ಕೈ ವಶ ಮಾಡಿಕೊಳ್ಳುವ ಸನ್ನಹದಲ್ಲಿವೆ. ಈಶಾನ್ಯ ಭಾಗದ ಸುಮಿನಗರ ಪ್ರದೇಶದಲ್ಲಿ ವಿದೇಶಿಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಆರೋಪಗಳು ಕೇಳಿಬಂದಿರುವ ನಡುವೆ ಶೆಲ್ ದಾಳಿ ಮುಂದುವರೆದಿದೆ. ರಷ್ಯಾ ಪಡೆಗಳು ಕ್ಯಿವ್ ನಗರದ ಹೊರಭಾಗದಲ್ಲಿರುವ ಇರ್ಪಿನ್ ನಗರದ ಮಿಲಿಟರಿ ಆಸ್ಪತ್ರೆ ಮೇಲೆ ಬಾಂಬ್ ದಾಳಿ ನಡೆಸಿವೆ.
ರಷ್ಯಾ ಪಡೆಗಳು ನಿನ್ನೆ ಝೋಪೋರಿಜಝೀದ ಅಣು ಸ್ಥಾವರವನ್ನು ಸುತ್ತುವರೆದು ದಿಗ್ಬಂಧನ ಹಾಕಿದ್ದವು. ಇಂದು ಉಕ್ರೇನ್ ಪಡೆಗಳು ಮರಳಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಚರ್ನೋಬೊಲಿನಗರದ ಅಣುಸ್ಥಾವರವನ್ನು ರಷ್ಯಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎನ್ನಲಾಗಿದೆ. ಉಕ್ರೇನ್‍ನಲ್ಲಿ ರೋನೌ, ಚರ್ನೋಬೊಲಿ, ಝೋಪೋರಿಜಝೀ ಮತ್ತು ಖ್ಮೆಲನ್ಟಿಸ್ಕೈನ ನಾಲ್ಕು ಅಣು ಸ್ಥಾವರಗಳಿವೆ. ಅವುಗಳಿಂದ ಭಾರೀ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಷಾ ಈ ಸ್ಥಾವರಗಳನ್ನು ವಶಕ್ಕೆ ತೆಗೆದುಕೊಂಡು ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವ ಹುನ್ನಾರಗೊಳಿಸಿದೆ.
ಈ ನಡುವೆ ಕುಡಿಯುವ ನೀರು ಲಭ್ಯವಾಗದಂತೆ ಮಾಡಲು ಪೈಪಲೈನ್ ಹಾಗೂ ಜಲಸಂಗ್ರಹಗಾರಗಳ ಮೇಲೂ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ. ರಷ್ಯಾ ವಿರುದ್ಧ ಬಲವಾದ ಹೋರಾಟಕ್ಕೆ ನಿಂತಿರುವ ಉಕ್ರೇನ್‍ನ ಅಧ್ಯಕ್ಷ ವೋಡ್ಲಿಮಿರ್ ಜೆಲೆನ್ಸ್ಕಿ ನ್ಯಾಟೋ ಪಡೆಯ ನಿರ್ಧಾರವನ್ನು ಖಂಡಿಸಿದ್ದಾರೆ. ಕ್ಯಿವ್‍ನ್ನು ಹಾರಾಟ ನಿಷೇಧ ಪ್ರದೇಶವನ್ನಾಗಿ ಘೋಷಿಸಿಸಲು ನ್ಯಾಟೋ ನಿರಾಕರಿಸಿರುವುದು ಜೆಲೆನ್ಸ್ಕಿ ಅವರ ಆಕ್ರೊಶಕ್ಕೆ ಕಾರಣವಾಗಿದೆ.
ಒಂದು ವೇಳೆ ಉಕ್ರೇನ್‍ನ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿ ಹಾರಾಟ ನಿಷೇಧ ಪ್ರದೇಶವೆಂದು ಘೋಷಿಸಿದರೆ ನ್ಯಾಟೋ ಪಡೆ ಯುದ್ದ ರಂಗಕ್ಕೆ ನೇರ ಪ್ರವೇಶ ಮಾಡಬೇಕಾಗುತ್ತಿತ್ತು. ರಷ್ಯಾದ ಸಮರ ವಿಮಾನ, ಹೆಲಿಕಾಪ್ಟರ್‍ಗಳ ಹಾರಾಟವನ್ನು ಹೊಡೆದುರುಳಿಸಲು ಅವಕಾಶವಿತ್ತು. ಆದರೆ ನ್ಯಾಟೋ ತಟಸ್ಥ ನೀತಿ ಅನುಸರಿಸಿದೆ.
ಇದೇ ಸಂದರ್ಭವನ್ನು ಬಳಸಿಕೊಂಡಿರುವ ರಷ್ಯಾ ಗರಿಷ್ಠ ಪ್ರಮಾಣದ ಯುದ್ಧಕ್ಕೆ ಮುಂದಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು ಆಕ್ರಮಣಕಾರರು ಹೊಸದಾಗಿ ನಿಯೋಜನೆಗೊಂಡಿದ್ದು, ಇದು ಅಪಾಯದ ಮುನ್ಸೂಚನೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ರಷ್ಯಾ ಪಡೆಗಳು ಮರಿಯಾಪೋಲ್‍ನಗರವನ್ನು ಸುತ್ತುವರೆದಿವೆ ಮತ್ತು ಅಲ್ಲಿನ ಸಂಚಾರವನ್ನು ನಿಷೇಸಿವೆ ಎಂದು ಸ್ಥಳೀಯ ಮೇಯರ್ ಆರೋಪಿಸಿದ್ದಾರೆ. ರಷ್ಯಾದ ಬಾಂಬ್ ದಾಳಿಯಿಂದ ನಾಗರಿಕರ ಸಾವುನೋವುಗಳು ಹೆಚ್ಚಾಗಲಿದೆ ಎಂದು ವರದಿಯಾಗಿದೆ.
ಈಗಾಗಲೇ ಆಕ್ರಮಣಕ್ಕೆ ಗುರಿಯಾಗಿರುವ ಅಣುಸ್ಥಾವರದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸಿದೆ. ವಿಶ್ವದ ವಿವಿಧ ರಾಷ್ಟ್ರಗಳ ಆರ್ಥಿಕ ಹಾಗೂ ವಾಣಿಜ್ಯ ದಿಗ್ಬಂಧನಕ್ಕೆ ಪ್ರತಿಯಾಗಿ ರಷ್ಯಾ ಕೂಡ ಸುದ್ದಿ ಸಂಸ್ಥೆಗಳು, ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಅಮೆರಿಕ ಹಾಗೂ ಇತರ ದೇಶಗಳ ವಹಿವಾಟು ಸಂಸ್ಥೆಗಳನ್ನು ನಿರ್ಬಂಸಿದೆ.
ಈ ನಡುವೆ ಉಕ್ರೇನ್ ಅಧ್ಯಕ್ಷರು ರಷ್ಯಾದ ಅಣು ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಕಾರ್ಯಾಚರಣೆಯನ್ನು ಚಾಲ್ತಿಯಲ್ಲಿಟ್ಟಿದ್ದು, ಶಾಂತಿ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ. ರಷ್ಯಾ ವಾಯುಮಾರ್ಗವನ್ನು ಬಳಸಲು ನಿರ್ಬಂಧ ಹೇರಬೇಕು. ಜಗತ್ತು ಅಪಾಯಕಾರಿ ಪರಿಸ್ಥಿತಿಯನ್ನು ನೋಡುತ್ತಾ ಕುಳಿತುಕೊಳ್ಳಬಾರದು. ಸಮಯಕ್ಕೆ ಸರಿಯಾಗಿ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ವಿಶ್ವದ ಆರ್ಥಿಕ ಪಾಲುದಾರ ದೇಶಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ವಿಶ್ವಬ್ಯಾಂಕ್ ಸೇರಿದಂತೆ ಬಹಳಷ್ಟು ಸಂಸ್ಥೆಗಳು ತಮಗೆ ನೆರವು ನೀಡುವ ಭರವಸೆ ನೀಡಿವೆ. ಇದರಿಂದಾಗಿ ರಷ್ಯಾದ ಆಕ್ರಮಣದಿಂದ ಹೊರಬರುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ. ಅಮೆರಿಕದ ಸೆನೆಟರ್‍ಗಳನ್ನು ಉದ್ದೇಶಿಸಿ ಇಂದು ಉಕ್ರೇನ್ ಅಧ್ಯಕ್ಷರು ಮಾತನಾಡಲಿದ್ದು, ಪರಿಸ್ಥಿತಿಯನ್ನು ವಿವರಿಸಲಿದ್ದಾರೆ.

Articles You Might Like

Share This Article