ಕಿವ್ (ಉಕ್ರೇನ್), ಫೆ.24- ವಿಶ್ವದ ಎರಡನೇ ಮಹಾಯುದ್ಧ ಬಳಿಕ ಜಾಗತಿಕವಾಗಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ರಷ್ಯಾದ ಸೇನೆ ಉಕ್ರೇನ್‍ನ ಹಲವು ನಗರಗಳ ಹಾಗೂ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ, ರಾಜಧಾನಿಯ ವಿಮಾನ ನಿಲ್ದಾಣವನ್ನು ಧ್ವಂಸ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ವಿಮಾನಗಳು ಹಾಗೂ ಹೆಲಿಕಾಫ್ಟರ್ ಅನ್ನು ಹೊಡೆದುರಳಿಸಿದೆ. ಯುದ್ಧದಿಂದಾಗಿ ಸಂಭವಿಸಿರುವ ಸಾವು ನೋವುಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ರಷ್ಯಾ ಅಧ್ಯಕ್ಷರು ಟಿವಿಗಳಲ್ಲಿ ಮಾತನಾಡುತ್ತಾ ಯುದ್ಧ ಘೋಷಣೆ ಮಾಡುತ್ತಿದ್ದಂತೆ ರಷ್ಯಾ ಪಡೆ ದಾಳಿ ಶುರು ಮಾಡಿದೆ. ಉಕ್ರೇನ್ ರಾಜಧಾನಿ ಕಿವ್ ನಗರದ ವಿಮಾನ ನಿಲ್ದಾಣದ ಬಳಿ ಗುಂಡಿನ ಕಾಳಗ ನಡೆದಿದೆ. ರಷ್ಯಾದ ರಕ್ಷಣಾ ಸಚಿವರು ಉಕ್ರೇನ್‍ನ ವಿಮಾನ ನಿಲ್ದಾಣವನ್ನು ಧ್ವಂಸ ಮಾಡಿದ್ದು, ಉಕ್ರೇನ್ ಸೇನೆಯ ಮೂಲಸೌಲಭ್ಯವನ್ನು ನಿಶ್ಯಸ್ತಿಕರಣಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಈ ನಡುವೆ ಉಕ್ರೇನ್‍ನ ಸೇನೆ ರಷ್ಯಾದ ಐದು ವಿಮಾನಗಳನ್ನು ಮತ್ತು ಹೆಲಿಕಾಫ್ಟರ್ ಅನ್ನು ಲುಹಾನ್ಸಕ್ ಭಾಗದಲ್ಲಿ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.
ರಾಜಧಾನಿಯ ಪೂರ್ವ ಭಾಗದ ಬ್ಯ್ರೋಸ್ಪಿಲ್ ಪ್ರದೇಶದಲ್ಲಿ ಹಲವು ಸ್ಪೋಟಗಳು ಸಂಭವಿಸಿವೆ. ಅಮೆರಿಕಾದ ಸುದ್ದಿಸಂಸ್ಥೆಯ ಪ್ರಕಾರ ಡಾನ್‍ಬಾಸ್ ನಗರದಲ್ಲಿ ಎರಡು ಬೃಹತ್ ಸ್ಪೋಟಗಳು ಗುರುವಾರ ಬೆಳಗ್ಗೆ ಸಂಭವಿಸಿವೆ. ರ್ಖಾಕಿವ್ ಪ್ರದೇಶದಲ್ಲೂ ಬಾಂಬ್ ದಾಳಿಯಾಗಿದೆ. ರಾಜಧಾನಿ ಕಿವ್ ಅನ್ನು ಶತ್ರುಸೇನೆ ಸುತ್ತುವರೆದಿದೆ.
ರಷ್ಯಾಕ್ಕೆ ಬೆಂಬಲವಾಗಿ ನಿಂತಿರುವ ಉಕ್ರೇನ್‍ನ ಪ್ರತ್ಯೇಕವಾದಿಗಳು ಪೂರ್ವ ಭಾಗದ ಶ್ಚಾಸ್ಟೀಯ ನಗರದ ಮೇಲೆ ಒಳ ಭಾಗದಿಂದ ದಾಳಿ ಆರಂಭಿಸಿದ್ದಾರೆ. ಡೋನೆಟ್ಸ್ಕ್ ನಗರವು ದಾಳಿಯಿಂದ ತತ್ತರಿಸಿದೆ. ದಾಳಿಗೂ ಮುನ್ನಾ ಪ್ರತ್ಯೇಕವಾದಿಗಳು ಸಹಾಯಕ್ಕಾಗಿ ರಷ್ಯಾದ ಮಾಸ್ಕೋವಾಗೆ ಮನವಿ ಮಾಡಿದ್ದರು ಮತ್ತು ಅಮೆರಿಕಾ ಅಪಪ್ರಚಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು.
ಯುದ್ಧ ಪೀಡಿತ ಪ್ರದೇಶಗಳಲ್ಲಿ ಜನ ಭಯ ಭೀತವಾಗಿದ್ದು, ಮೆಟ್ರೋ ರೈಲುಗಳ ಮೂಲಕ ಆಶ್ರಯತಾಣಗಳಿಗೆ ತೆರಳುತ್ತಿದ್ದಾರೆ. ದೇಶದಲ್ಲಿ ಸಮರ ಕಾನೂನು ಜಾರಿಗೊಳಿಸಲಾಗಿದೆ. ಉಕ್ರೇನ್ ತನ್ನ ರಕ್ಷಣೆಗಾಗಿ ಕ್ಷಿಪಣಿ ನಿರೋಧ ಗುಂಡುಗಳ ಹಾರಾಟವನ್ನು ನಿರಂತರವಾಗಿ ಚಾಲನೆಯಲ್ಲಿಟ್ಟಿದ್ದು, ಆಕಾಶದಲ್ಲಿ ಕೆಂಪುಬಣ್ಣದ ಜ್ವಾಲಾಮುಖಿ ಭೋರ್ಗರೆದಂತೆ ಭಾಸವಾಗುತ್ತಿದೆ.
ಯುದ್ಧ ಪೀಡಿತ ಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದ ಭಾರೀ ಆತಂಕ ಸೃಷ್ಟಿಯಾಗಿದೆ. ರಷ್ಯಾ ತಾನು ನಾಗರೀಕರ ಮೇಲೆ ದಾಳಿ, ಮಾಡುವುದಿಲ್ಲ, ಉಕ್ರೇನ್ ಸೇನೆಯಷ್ಟೆ ತನ್ನ ಗುರಿ ಎಂದು ಹೇಳಿಕೊಂಡಿದ್ದರು. ವಾಸ್ತವದಲ್ಲಿ ಕ್ಷಿಪಣಿ ದಾಳಿ ಜನವಸತಿ ಪ್ರದೇಶಗಳಲ್ಲಿ ಭಯ ಭೀತ ವಾತಾವರಣ ನಿರ್ಮಿಸಿದೆ.
