ಉಕ್ರೇನ್‍ ವಿಶ್ವವಿದ್ಯಾನಿಲಯಗಳ ಎಡವಟ್ಟು, ಪರದಾಡುತ್ತಿರುವ ವಿದ್ಯಾರ್ಥಿಗಳು

Social Share

ಕೀವ್,ಮಾ.2-ಉಕ್ರೇನ್‍ನ ವಿಶ್ವವಿದ್ಯಾಲಯಗಳು ಸೃಷ್ಟಿಸಿದ ಗೊಂದಲ ಮತ್ತು ಸರ್ಕಾರದ ಸಕಾಲಿಕ ರಾಜತಾಂತ್ರಿಕ ಸಮಯ ಪ್ರಜ್ಞೆ ಕೊರತೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಯುದ್ಧ ಪೀಡಿತ ಪ್ರದೇಶದಲ್ಲಿ ಪರದಾಡುವಂತಾಗಿದೆ.
ಬಹಳಷ್ಟು ದೇಶಗಳು ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ತಮ್ಮ ದೇಶದ ಪ್ರಜೆಗಳನ್ನು ಸ್ಥಳಾಂತರಿಸಿವೆ. ಇನ್ನು ಕೆಲವು ದೇಶಗಳು ಉಡಾಫೆಯಿಂದಲೋ ಅಥವಾ ಸಮಯ ಪ್ರಜ್ಞೆ ಕೊರತೆಯಿಂದ ನಿರ್ಲಕ್ಷಿಸಿವೆ. ಆದರೆ, ಭಾರತೀಯರ ಸಮಸ್ಯೆಯೇ ಭಿನ್ನವಾಗಿದೆ. ಫೆ.24ರಿಂದ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದೆ.
ಅದಕ್ಕೂ ಎರಡು ದಿನ ಮೊದಲು ಭಾರತೀಯ ರಾಯಭಾರ ಕಚೇರಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಜೆಗಳಿಗೆ ಸ್ವದೇಶಕ್ಕೆ ಹಿಂದಿರುಗಲು ಸಲಹೆ ನೀಡಿದೆ.
ಈ ಹಂತದಲ್ಲಿ ಉಕ್ರೇನ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದೆ. ಲಕ್ಷಾಂತರ ಖರ್ಚು ಮಾಡಿ ಎಂಬಿಬಿಎಸ್ ಸೇರಿದಂತೆ ಇತರೆ ಶಿಕ್ಷಣಕ್ಕಾಗಿ ಉಕ್ರೇನ್‍ಗೆ ತೆರಳಿದ ವಿದ್ಯಾರ್ಥಿಗಳು ಭೀಕರ ಮುನ್ಸೂಚನೆ ಇಲ್ಲದೆ. ವಿಶ್ವವಿದ್ಯಾನಿಲಯಗಳ ಕಠಿಣ ನಿಯಮಗಳಿಗೆ ಅಂಜಿ ಸ್ವದೇಶಕ್ಕೆ ಪ್ರಯಾಣಕ್ಕೆ ಹಿಂದೇಟು ಹಾಕಿದ್ದಾರೆ.
ಒಂದು ವೇಳೆ ಉಕ್ರೇನ್ ತೊರೆದರೆ ಶಿಕ್ಷಣದ ಹೊಣೆಗಾರಿಕೆಗೆ ನಾವು ಬಾಧ್ಯಸ್ಥರಲ್ಲ ಎಂದು ಉಕ್ರೇನ್ ವಿಶ್ವವಿದ್ಯಾನಿಲಯಗಳು ಎಚ್ಚರಿಕೆ ನೀಡಿದ್ದವು ಎನ್ನಲಾಗಿದೆ. ಹೀಗಾಗಿ ಬಹಳಷ್ಟು ವಿದ್ಯಾರ್ಥಿಗಳು ಭಾರತಕ್ಕೆ ಹಿಂದಿರುಗಲು ಆರಂಭದಲ್ಲಿ ಮನಸ್ಸು ಮಾಡಿಲ್ಲ. ಆದರೆ, ರಷ್ಯಾ ಆಕ್ರಮಣ ಶುರು ಮಾಡಿದ ಬಳಿಕ ಗುರುವಾರದಿಂದ ಪರಿಸ್ಥಿತಿ ಭೀಕರತೆ ಪಡೆದುಕೊಂಡಿದೆ.
ಎಲ್ಲೆಲ್ಲೂ ಬಾಂಬ್‍ಗಳ ಸುರಿಮಳೆ, ಗುಂಡಿನ ಚಕಮಕಿ. ಜೀವ ಉಳಿಸುವುದೇ ಕಷ್ಟ ಎಂದಾದಾಗ ಅನಿವಾರ್ಯವಾಗಿ ದೇಶ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಅಷ್ಟೊತ್ತಿಗೆ ವಿಮಾನ ಸಂಚಾರ ನಿರ್ಬಂಧಿಸಲಾಗಿದ್ದು, ಕಫ್ರ್ಯೂ ಜಾರಿಯಾಗಿದೆ. ರೈಲು ಸಂಚಾರ ಸ್ಥಗಿತಗೊಂಡಿತು.
ಭಾರತ ಸರ್ಕಾರ ಉಕ್ರೇನ್‍ನಲ್ಲಿದ್ದ ವಿದ್ಯಾರ್ಥಿಗಳಿಗೆ ನೆರೆಯ ದೇಶಗಳ ಗಡಿ ಭಾಗಕ್ಕೆ ಆಗಮಿಸುವಂತೆ ಸಲಹೆ ನೀಡಿತ್ತು. ಶನಿವಾರದವರೆಗೂ ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ಭಾರತದ ರಾಷ್ಟ್ರಧ್ವಜ ಹಾಕಿಕೊಂಡು ಗಡಿ ಭಾಗಕ್ಕೆ ಆಗಮಿಸಿದ್ದರು. ಆದರೆ, ಶನಿವಾರದ ಬಳಿಕ ವಾಹನಗಳ ಸಂಚಾರವೂ ಕೂಡ ದುಸ್ತರವಾಗಿದೆ.
ಭೂಮಿಯ ಮೇಲ್ಭಾಗಕ್ಕೆ ಬಾಂಬ್ ಭೀತಿ, ನೆಲಮಹಡಿಯಲ್ಲೇ ಉಳಿದರೆ ಹಸಿವಿನ ಸಂಕಟ, ಕುಡಿಯುವ ನೀರು ದೊರೆಯದೆ ನಿತ್ರಾಣವಾಗಿ ಬಳಲುತ್ತಿರುವ ವಿದ್ಯಾರ್ಥಿಗಳು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಮೊನ್ನೆ ಕಫ್ರ್ಯೂವನ್ನು ಸಡಿಲಗೊಳಿಸಿ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಸುಮಾರು 4ಸಾವಿರ ವಿದ್ಯಾರ್ಥಿಗಳು ಪೋಲ್ಯಾಂಡ್, ಸ್ಲೋವಾಕೀಯ, ಹಂಗ್ರೈ, ರೊಮ್ಯಾನಿಯಾ, ಮೋಲ್ಡಾವ ಸೇರಿದಂತೆ ನೆರೆಯ ರಾಷ್ಟ್ರಗಳ ಗಡಿ ಭಾಗಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಾಹಿತಿಯ ಕೊರತೆಯಿಂದಾಗಿ ಪೋಲ್ಯಾಂಡ್ ಹಾಗೂ ಮತ್ತಿತರ ದೇಶಗಳ ಭದ್ರತಾ ಸಿಬ್ಬಂದಿಗಳು ಭಾರತೀಯ ವಿದ್ಯಾರ್ಥಿಗಳ ಮೇಲೆ ಅತಿಕ್ರಮ ಪ್ರವೇಶ ಎಂಬ ಆರೋಪದಡಿ ದೌರ್ಜನ್ಯವೆಸಗಿದ್ದಾರೆ. ಕೆಲವು ಕಡೆ ಅಪಹರಣದ ಆರೋಪಗಳೂ ಕೇಳಿ ಬಂದಿವೆ.
ಗಡಿ ಭಾಗದಲ್ಲಿ ತೀವ್ರ ಶೀತ ವಾತಾವರಣವಿದ್ದು, ಹೊದಿಕೆ, ಆಹಾರ, ನೀರು ಇಲ್ಲದೆ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ಆರಂಭಿಸಿದೆ. ಈವರೆಗೂ ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ ವಿಮಾನಗಳು ಸುಮಾರು 10 ಬಾರಿ ಸಂಚರಿಸಿದ್ದು, ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಈ ನಡುವೆ ಬೇರೆ ವಿಮಾನಯಾನ ಸಂಸ್ಥೆಗಳು ಕೂಡ ಆಪರೇಷನ್ ಗಂಗಾಕ್ಕೆ ಕೈ ಜೋಡಿಸಲು ಮುಂದೆ ಬಂದಿರುವುದರಿಂದ ವಿದ್ಯಾರ್ಥಿಗಳ ಸ್ಥಳಾಂತರ ಚುರುಕುಗೊಳ್ಳುವ ವಿಶ್ವಾಸ ವ್ಯಕ್ತವಾಗಿದೆ.
ಆರಂಭದಲ್ಲೇ ಭಾರತೀಯ ರಾಜತಾಂತ್ರಿಕ ಸಿಬ್ಬಂದಿ ಉಕ್ರೇನ್‍ನ ವಿಶ್ವವಿದ್ಯಾಲಯಗಳ ಜತೆ ಸಮಾಲೋಚನೆ ನಡೆಸಿ ಸ್ಪಷ್ಟ ಭರವಸೆ ನೀಡಿದ್ದರೆ ಯಾವುದೇ ಗೊಂದಲಗಳಾಗುತ್ತಿರಲಿಲ್ಲ ಎಂಬ ಮಾಹಿತಿ ಇದೆ. ಯುದ್ಧ ಆರಂಭವಾಗುವವರೆಗೂ ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂದೇಟು ಹಾಕಿದ ವಿವಿಗಳು, ಆಕ್ರಮಣ ತೀವ್ರವಾದ ಬಳಿಕ ತಾವಾಗಿಯೇ ವಾಹನಗಳನ್ನು ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳನ್ನು ಗಡಿ ಭಾಗಕ್ಕೆ ಕಳುಹಿಸಿ ಕೊಟ್ಟಿದೆ.
ಮೊನ್ನೆ ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ಕಿರಣ್ ರಿಜೀಜು, ಹರ್ದೀಪ್‍ಸಿಂಗ್ ಪುರಿ, ಬಿ.ಕೆ.ಸಿಂಗ್,ಜ್ಯೋತಿರಾಜ್‍ಸಿಂಧ್ಯಾ ಅವರುಗಳನ್ನು ಉಕ್ರೇನ್‍ನ ಗಡಿ ಭಾಗದ ದೇಶಗಳಿಗೆ ರವಾನಿಸಲಾಗಿದೆ.
ಹೊಸ ಬೆಳವಣಿಗೆಯಲ್ಲಿ ಯುದ್ಧ ಮತ್ತೆ ಮುಂದುವರೆದಿದ್ದು, ರಷ್ಯಾ ವಿರುದ್ಧ ವಿಶ್ವಸೇನೆ ಸಂಘಟಿಸುವ ಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಬಹಳಷ್ಟು ರಾಷ್ಟ್ರಗಳು ಒಟ್ಟಾಗ ಪ್ರತೀಕಾರ್ತವಾಗಿ ರಷ್ಯಾ ವಿರುದ್ಧ ಮುಗಿ ಬೀಳುವ ಅಂದಾಜುಗಳಿದ್ದು, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾದಲ್ಲಿರುವ ತಮ್ಮ ಪ್ರಜೆಗಳು, ರಾಯಭಾರಿ ಕಚೇರಿಯಲ್ಲಿರುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುತ್ತಿವೆ.
ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಧೈರ್ಯದ ಮೇಲೆ ಭಾರತ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಉಕ್ರೇನಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತಿದೆ.

Articles You Might Like

Share This Article