ಡೊನೆಟ್ಸ್‍ಕ್/ಮಾಸ್ಕೋ,ಫೆ.20- ರಷ್ಯಾದ ಕಾರ್ಯತಂತ್ರಾತ್ಮಕ ಅಣ್ವಸ್ತ್ರ ಪಡೆಗಳು ಖುದ್ದು ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರ ಉಪಸ್ಥಿತಿಯಲ್ಲಿ ಸಮರಾಭ್ಯಾಸ ನಡೆಸಿದ್ದು ಉಕ್ರೇನ್‍ನ ಗಡಿಯಲ್ಲಿ ಜಮಾವಣೆಗೊಂಡಿರುವ ರಷ್ಯಾದ ಸೇನಾಪಡೆಗಳು ಯಾವುದೇ ಸಮಯದಲ್ಲಿ ದಾಳಿ ನಡೆಸಲು ಸಜ್ಜಾಗಿವೆ ಎಂದು ಅಮೆರಿಕ ಆರೋಪಿಸಿದೆ.
ಪಶ್ಚಿಮದಲ್ಲಿ ಯುದ್ಧಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಯಾವುದೇ ಕ್ಷಣದಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಬಹುದಾದ ಸನ್ನಿವೇಶ ನಿರ್ಮಾಣಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡವು ತಿಳಿಸಿದೆ.
ಬಿಡೆನ್ ಅವರು ಇಂದು ತಮ್ಮ ಉನ್ನತ ಸಲಹೆಗಾರರ ಸಭೆ ಕರೆದು ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ರಷ್ಯಾ ಈ ಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆ ಕಡಿಮೆ ಮಾಡುವ ಯಾವುದೇ ಲಕ್ಷಣಗಳು ತಮಗೆ ಗೋಚರಿಸುತ್ತಿಲ್ಲ ಮತ್ತು ಈ ಸನ್ನಿವೇಶದ ಬಗ್ಗೆ ತೀವ್ರ ಆತಂಕಗೊಂಡಿರುವುದಾಗಿ ಶ್ರೀಮಂತ ರಾಷ್ಟ್ರಗಳ ಜಿ-7 ಗುಂಪಿನ ವಿದೇಶಾಂಗ ಸಚಿವರು ಹೇಳಿದ್ದಾರೆ.
ಕೀವ್ ಮತ್ತು ಮಾಸ್ಕೋ ಗಡಿ ಸಮೀಪ ಹೊಸ ಷೆಲ್ ದಾಲಿ ನಡೆಸಿರುವ ಬಗ್ಗೆ ಪರಸ್ಪರ ಆಪಾದನೆಗಳನ್ನು ಮಾಡಿಕೊಂಡ ಬಳಿಕ ಫ್ರಾನ್ಸ್ ಮತ್ತು ಜರ್ಮನಿ ಉಕ್ರೇನ್‍ನಲ್ಲಿರುವ ತಮ್ಮ ಎಲ್ಲಾ ಅಥವಾ ಕೆಲವು ಪ್ರಜೆಗಳಿಗೆ ಉಕ್ರೇನ್ ತೊರೆಯಲು ಸೂಚಿಸಿವೆ.
