ಜಿನೇವಾ, ಫೆ.24- ವಿಶ್ವ ಸಮುದಾಯದ ಬಹುತೇಕ ರಾಷ್ಟ್ರಗಳ ಪ್ರತಿರೋಧದ ನಡುವೆಯೂ ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರೆಸಿರುವ ರಷ್ಯಾ ಅಧ್ಯಕ್ಷರು ಇಂದು ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆ (ಯುದ್ಧ) ಘೋಷಣೆ ಮಾಡುವ ಮೂಲಕ ಜಾಗತಿಕ ಬಿಕ್ಕಟ್ಟಿಗೆ ನಾಂದಿಯಾಡಿದ್ದಾರೆ.
ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ರಾಷ್ಯಾ ಮುಂದಿನ ದಿನಗಳಲ್ಲಿ ಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು ಪರಿಸ್ಥಿತಿ ತಿಳಿಗೊಂಡಿಲ್ಲ. ಈ ನಡುವೆ ತಮ್ಮ ದೇಶವನ್ನು ಉದ್ದೇಶಿಸಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಮಾತನಾಡಿದ್ದು, ಉಕ್ರೇನ್ ಕಾರ್ಯಾಚರಣೆಯ ವಿಷಯವಾಗಿ ಯಾರೇ ಮಧ್ಯ ಪ್ರವೇಶಿಸಲು ಬಯಸಿದರೆ ಇತಿಹಾಸದಲ್ಲಿ ಹಿಂದೆಂದು ಅನುಭವಿಸದೆ ಅನುಭವನ್ನು ಎದುರಿಸಬೇಕಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆ ತುತು ಸಭೆ ನಡೆಸಿ ಪರಿಸ್ಥಿತಿ ಅವಲೋಕನ ನಡೆಸಿದೆ. ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಉಕ್ರೇನ್ ನಿಂದ ವಾಪಾಸ್ ಕರೆಸಿಕೊಳ್ಳುತ್ತಿವೆ. ಭಾರತದ ಏರ್ ಇಂಡಿಯಾ ವಿಮಾನ ಇಂದು ಉಕ್ರೇನ್ ನಿಂದ ಎರಡನೇ ಹಂತದಲ್ಲಿ ವಿದ್ಯಾರ್ಥಿಗಳನ್ನು ವಾಪಾಸ್ ಕರೆಸಿಕೊಂಡಿದೆ. ಷೇರು ಮಾರುಕಟ್ಟೆ ಅಲ್ಲೋಲ್ಲಕಲ್ಲೋಲವಾಗಿದೆ, ತೈಲ ಬೆಲೆ ದಿಡೀರ್ ಏರಿಕೆಯಾಗಿದೆ.
ಉಕ್ರೇನ್ ಸೀಮಾ ರೇಖೆ ದಾಟಿ ಈವರೆಗೂ ತೆರೆ ಮರೆಯ ದಾಳಿ ನಡೆಸುತ್ತಿದ್ದ ರಷ್ಯಾ ಇಂದು ಅಕೃತವಾಗಿ ಯುದ್ಧ ಘೋಷಣೆ ಮಾಡಿದೆ. ಇಂದು ಬೆಳಗ್ಗೆ ವಾಡ್ಲಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡುತ್ತಿದ್ದ ಬೆನ್ನಲ್ಲೆ, ರಷ್ಯಾ ಸೇನೆ ಉಕ್ರೇನ್ನ ಆರು ನಗರಗಳ ಮೇಲೆ ಬಾಂಬ್ ದಾಳಿ ನಡೆಸಿದೆ.
ದಾಳಿ ಸಂತ್ರಸ್ಥ ದೇಶದ ರಾಜಧಾನಿ ಕೀವ್, ಮುಖ್ಯನಗರ ಡಾನ್ಬಾಸ್ ಸೇರಿದಂತೆ ಆರು ನಗರಗಳ ಮೇಲೆ ಬಾಂಬ್ ದಾಳಿ ನಡೆದಿದೆ. ಕಿವ್ ನಗರವನ್ನು ರಷ್ಯಾ ಸೇನೆ ಆಕ್ರಮಿಸಿಕೊಂಡಿದ್ದು, ಈವರೆಗೆ 13 ನಗರಗಳ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ರಷ್ಯಾ ಉಳಿದ ನಗರಗಳನ್ನು ವೇಗವಾಗಿ ವಶಕ್ಕೆ ತೆಗೆದುಕೊಳ್ಳುತ್ತಿದೆ. ಹೈಡ್ರಾಲಿಕ್ ವಿದ್ಯುತ್ ಸ್ಥಾವರದ ಮೇಲೆ ಸೇನಾ ದಾಳಿಯಾಗಿದೆ. ಅಂತರಾಷ್ಟ್ರೀಯ ಸೇರಿದಂತೆ ದೇಶಿಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬಲಿಷ್ಠ ರಷ್ಯಾದ ಆಕ್ರಮಣವನ್ನು ಸಹಿಸಲಾಗದೆ ಉಕ್ರೇನ್ ತತ್ತರಿಸಿದೆ. ಆದರೂ ಜಗ್ಗದೆ ತಾವು ಯುದ್ಧದಲ್ಲಿ ರಷ್ಯಾವನ್ನು ಮಣಿಸುತ್ತೇವೆ ಎಂದು ಉಕ್ರೇನ್ನ ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ರಷ್ಯಾ ದಾಳಿಯ ಬೆನ್ನಲ್ಲೆ ವಿಶ್ವಸಂಸ್ಥೆಯ ಭದ್ರಾತಾ ಮಂಡಳಿ ತುರ್ತು ಸಭೆ ಕರೆದಿದೆ.
ಅಮೆರಿಕಾ ಅಧ್ಯಕ್ಷ ಜೋ ಬಿಡೇನ್, ಮುಂದಿನ ದಿನಗಳಲ್ಲಿ ಸಂಭವಿಸುವ ಸಾವು-ನೋವುಗಳಿಗೆ ರಷ್ಯಾ ಹೊಣೆಯಾಗಬೇಕಾಗುತ್ತದೆ. ತಾವು ಶ್ವೇತ ಭವನದಿಂದಲೇ ಪರಿಸ್ಥಿತಿಯನ್ನು ಅವಲೋಕನ ನಡೆಸುತ್ತಿದ್ದು ಸಂಜೆ ಅಮೆರಿಕಾದ ರಾಷ್ಟ್ರೀಯ ಭದ್ರತಾ ಪಡೆಯ ಅಕಾರಿಗಳಿಂದ ಮಾಹಿತಿ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ವಿಶ್ವಸಂಸ್ಥೆ ಮಿಲಿಟರಿ ಕಾರ್ಯಚರಣೆಯನ್ನು ತಕ್ಷಣ ನಿಲ್ಲಿಸುವಂತೆ ರಷ್ಯಾಕ್ಕೆ ಸೂಚನೆ ನೀಡಿದೆ. ಆದರೆ ಅದಕ್ಕೆ ವಾಡ್ಲಿಮಿರ್ ಪುಟಿನ್ ಕ್ಯಾರೆ ಎಂದಿಲ್ಲ. ಹೀಗಾಗಿ ಯುದ್ಧ ಮುಂದುವರೆದಿದ್ದು, ಅತಿಶೀಘ್ರದಲ್ಲೇ ಉಕ್ರೇನ್ ರಷ್ಯಾ ವಶವಾಗುವ ಸಾಧ್ಯತೆ ಇದೆ. ಬೇರೆಲ್ಲಾ ದೇಶಗಳು ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದು, ಮಿಲಿಟರಿ ಕಾರ್ಯಚರಣೆ ತಡೆಯುವ ನಿಟ್ಟಿನಲ್ಲಿ ಈವರೆಗೂ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಹೇಳಲಾಗಿದೆ.
