ಸಂಧಾನ ಮಾತುಕತೆ ನಡುವೆಯೂ ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ

Social Share

ನವದೆಹಲಿ, ಫೆ.28- ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ, ಅಂತರಾಷ್ಟ್ರೀಯ ಸಮುದಾಯದ ವಿರೋಧ, ಸಂಧಾನ ಮಾತುಕತೆ ಹೆಜ್ಜೆಗಳ ನಡುವೆಯೂ ರಷ್ಯಾ ತನ್ನ ನಿಲುವನ್ನು ಸಡಿಲಿಸದೆ ಉಕ್ರೇನ್ ಮೇಲಿನ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಎರಡು ದೇಶಗಳ ನಡುವಿನ ಯುದ್ಧ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದು ಉಕ್ರೇನ್ ದೇಶಾದ್ಯಂತ ವಾಯುದಾಳಿ, ಕ್ಷಿಪಣಿ ಪ್ರಯೋಗ, ಗುಂಡಿನ ಚಕಮಕಿ ಮುಂದುವರೆದಿದೆ. ಈ ವರೆಗಿನ ಹೋರಾಟದಲ್ಲಿ 352 ಉಕ್ರೇನ್ ನಾಗರೀಕರು ಮೃತಪಟ್ಟಿದ್ದು, ಎರಡು ಕಡೆ ಸಾಕಷ್ಟು ಜೀವ ಹಾನಿಯಾಗಿದೆ. ಅಪಾರ ಪ್ರಮಾಣ ಆಸ್ತಿ ನಷ್ಟವಾಗಿದ್ದು, ಉಕ್ರೇನ್‍ನಲ್ಲಿ ಜನ ಜೀವನ ದುಸ್ತರವಾಗಿದೆ.
ಉಕ್ರೇನಿಯರು ಜೀವ ಭಯದಿಂದ ಮೆಟ್ರೋ ನಿಲ್ದಾಣಗಳ ಕೆಳ ಮಹಡಿ, ಬಂಕರ್ ಹಾಗೂ ಸುರಂಗ ಮಾರ್ಗಗಳಲ್ಲಿ ಅಡಗಿ ಕುಳಿತಿದ್ದಾರೆ. ಅಡಗಿ ಕುಳಿತಿದ್ದವರಿಗೆ ಆಹಾರ, ನೀರು, ಜೀವರಕ್ಷಕ ಔಷಗಳ ಕೊರತೆ ಕಾಡುತ್ತಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಪುನರ್ವಸತಿ ತಂಡ ಉಕ್ರೇನ್‍ಗೆ ತಲುಪಿದೆಯಾದರೂ ರಷ್ಯಾದ ಆಕ್ರಮಣದಿಂದ ಸಂತ್ರಸ್ಥರಿಗೆ ನೆರವು ನೀಡಲು ಸಾಧ್ಯವಾಗುತ್ತಿಲ್ಲ.
ಈ ನಡುವೆ ಉಕ್ರೇನ್‍ನಲ್ಲಿ ನೆಲೆಸಿದ್ದ ವಿದೇಶಿಗರು ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಪ್ರಕ್ರಿಯೆ ತ್ರಾಸದಾಯಕವಾಗಿ ಮುಂದುರೆದಿದೆ. ರಷ್ಯಾ ವಿದೇಶಿಗಳ ಸ್ಥಳಾಂತರಕ್ಕೆ ರಾಜತಾಂತ್ರಿಕ ಮಾತುಕತೆಯ ಮೂಲಕ ಸಹಕಾರ ನೀಡುತ್ತಿದೆ.
ರಷ್ಯಾ ಪಡೆಗಳ ಮಾಹಿತಿ ಪ್ರಕಾರ ಈಗಾಗಲೇ ಕ್ಯಿವ್ ಮತ್ತು ಕರ್ಕಿವ್ ನಗರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ಘೋಷಣೆಯಾಗಿದೆ. ಆದರೆ ಉಕ್ರೇನ್ ಇದನ್ನು ನಿರಾಕರಿಸಿದ್ದು, ದೇಶದ ಎಲ್ಲಾ ಭಾಗಗಳು ಈವರೆಗೂ ತಮ್ಮ ಹಿಡಿತದಲ್ಲೇ ಇವೆ ಎಂದು ಸ್ಪಷ್ಟ ಪಡಿಸಿದೆ.
# ಮುಂದುವರೆದ ದಾಳಿ:
ಇಂದು ಬೆಳಗ್ಗೆ ಕೂಡ ರಷ್ಯಾ ಜನವಸತಿ ಪ್ರದೇಶದ ಮೇಲೆ ದಾಳಿ ಮಾಡಿದೆ. ಝ್ಯಟೋಮ್ಯಾರ್ ನಗರದ ಐತಿಹಾಸಿಕ ಕಟ್ಟಡ ಮತ್ತು ಸಿನಿಮಾ ಮಂದಿರ ಸೆಲ್ ದಾಳಿಯಿಂದ ಧ್ವಂಸಗೊಂಡಿದೆ. ಚೆರ್ನಿವ್ ನಗರದ ಮೇಲೆ ಕ್ಷಿಪಣಿ ಅಪ್ಪಳಿಸಿದ್ದರಿಂದ ಜನವಸತಿ ಕಟ್ಟಡ ಹಾನಿಯಾಗಿದೆ. ಕಟ್ಟಡದ ಎರಡು ಕೆಳಮಹಡಿಯಲ್ಲಿ ಬೆಂಕಿ ಉರಿಯುತ್ತಿದೆ. ಒಬ್ಬ ಮಹಿಳೆ ಗಾಯಗೊಂಡಿದ್ದಾರೆ.
ಭಾನುವಾರ ಪೂರ್ತಿ ರಷ್ಯಾ ಪಡೆಗಳು ಬಾಂಬ್‍ಗಳ ಸುರಿಮಳೆಗೈಯುತ್ತಲೇ ಇದ್ದವು. ವೆಸ್ಲಿಕಿವ್ ನಗರದ ವಾಯುಸೇನಾ ನೆಲೆಯ ಮೇಲೆ ರಷ್ಯನ್ ಪಡೆಗಳು ಮುಗಿಬಿದ್ದಿವೆ. ಆದರೆ ಉಕ್ರೇನಿಯರು ಅದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಭಾನುವಾರದ ಹೋರಾಟ ಉಕ್ರೇನ್‍ಗೆ ಪ್ರಯಾಸದ್ದಾಗಿತ್ತು ಎಂದು ಉಕ್ರೇನ್ ಸೇನಾ ಮಹಾನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ.
ಹೋರಾಟದಲ್ಲಿ ಕ್ಯಿವ್ ಸೇರಿದಂತೆ ಎರಡು ಪ್ರಮುಖ ನಗರಗಳು ತಮ್ಮ ಕೈ ವಶವಾಗಿವೆ ಎಂದು ರಷ್ಯಾ ಹೇಳಿಕೊಂಡಿದೆ. ಆದರೆ ಉಕ್ರೇನ್ ನ ಒಂದಿಂಚು ಜÁಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಾವು ಶರಣಾಗುವುದಿಲ್ಲ. ರಷ್ಯಾ ಪಡೆಯನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಉಕ್ರೇನ್ ಹೇಳಿದೆ.
ಈವರೆಗಿನ ಹೋರಾಟದಲ್ಲಿ 4500 ರಷ್ಯಾ ಸೈನಿಕರನ್ನು ಹತ್ಯೆ ಮಾಡಿ, ಅಪಾರ ಪ್ರಮಾಣದ ವಾಹನಗಳು, ಯುದ್ಧ ಮೂಲ ಸೌಕರ್ಯಗಳನ್ನು ನಾಶಗೊಳಿಸಿರುವುದಾಗಿ ಹೇಳಿಕೊಂಡಿದೆ. 150 ಟ್ಯಾಂಕರ್‍ಗಳು, 700 ಯುದ್ಧ ವಾಹನಗಳು, 80 ತೈಲ ಟ್ಯಾಂಕರ್‍ಗಳು, ಒಂದು ಬಂಕರ್, 4 ರಕ್ಷಣಾ ವ್ಯವಸ್ಥೆ, 26 ಹೆಲಿಕಾಫ್ಟರ್ ಅನ್ನು ಧ್ವಂಸಗೊಳಿಸಿದ್ದೇವೆ ಎಂದು ಉಕ್ರೇನಿಯರು ತಿಳಿಸಿದ್ದಾರೆ.
ಈ ನಡುವೆ ರಷ್ಯಾದ ಆರ್ಥಿಕತೆ ಅಂತರಾಷ್ಟ್ರೀಯ ಸಮುದಾಯದ ಅಸಹಕಾರದಿಂದ ಕುಸಿಯಲಾರಂಭಿಸಿದೆ. ಜತೆಗೆ ಮಾತುಕತೆಗೆ ಬೆಲರುಸ್‍ನಲ್ಲಿ ಸಂಧಾನಕ್ಕೆ ವೇದಿಕೆ ಸಿದ್ಧಗೊಂಡಿದೆ. ರಷ್ಯಾದ ನಿಯೋಗ ಈಗಾಗಲೇ ಸ್ಥಳಕ್ಕೆ ತಲುಪಿದೆ. ಉಕ್ರೇನ್ ಆರಂಭದಲ್ಲಿ ಬೆಲರುಸ್‍ನಲ್ಲಿ ಮಾತುಕತೆ ನಡೆದರೆ ತಾವು ಭಾಗವಹಿಸುವುದಿಲ್ಲ ಎಂದು ಹೇಳಿದ್ದ ಉಕ್ರೇನ್ ನಿನ್ನೆ ತನ್ನ ನಿಲುವು ಬದಲಿಸಿದೆ.
ನಿನ್ನೆ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಬೇಷರತ್ ಆಗಿ ಮಾತುಕತೆಗೆ ನಾವು ಸಿದ್ದ ಎಂದು ಹೇಳಿದ್ದಾರೆ. ರಷ್ಯಾ ಅಧ್ಯಕ್ಷರು ಇಂದು ಸಂಜೆಯವರೆಗೂ ಮಾತುಕತೆ ನಡೆಯದಿದ್ದರೆ ಉಗ್ರದಾಳಿಯನ್ನು ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ. ಜೊತೆಗೆ ಪರಮಾಣು ಪಡೆಯನ್ನು ಅಖಾಡಕ್ಕಿಳಿಸಿರುವ ಪುಟಿನ್, ಮತ್ತಷ್ಟು ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.
ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಒತ್ತಡ ಹೇರುವ ಭಾಗವಾಗಿ ವಿಶ್ವಸಂಸ್ಥೆ ಇಂದು ಅಪರೂಪದ ಸಾಮಾನ್ಯ ಸಭೆ ಸಮಾವೇಶಗೊಂಡಿದೆ. ಅದರಲ್ಲೂ ಭಾರತ ತನ್ನ ತಟಸ್ಥ ನಿಲುವನ್ನು ಮುಂದುವರೆಸಿದೆ.

Articles You Might Like

Share This Article