ಮಾಸ್ಕೋ, ಮಾ.1- ಉಕ್ರೇನ್ ಮೇಲೆ ಆಕ್ರಮಣ ಮಾಡಿ ಜಾಗತಿಕ ಪ್ರತಿರೋಧಕ್ಕೆ ಗುರಿಯಾಗಿರುವ ರಷ್ಯಾ ಆರ್ಥಿಕ ದಿವಾಳಿತನದಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ರಷ್ಯಾದ ಉದ್ಯಮಿಗಳು, ರಫ್ತು ಆಮದುಗಾರರು ತಮ್ಮಲ್ಲಿರುವ ವಿದೇಶಿ ವಿನಿಮಯದ ಶೇ.80ರಷ್ಟನ್ನು ರಷ್ಯಾದ ರುಬೆಲ್‍ಗೆ ಪರಿವರ್ತನೆ ಮಾಡಿಕೊಳ್ಳುವಂತೆ ಕರೆ ನೀಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಾಮಾನ್ಯ ಅಧಿವೇಶನ, ಯೂರೋಪಿಯನ್ ಒಕ್ಕೂಟ ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ಜಾಗತಿಕ ರಾಷ್ಟ್ರಗಳು ಯುದ್ಧ ನಿಲ್ಲಿಸುವಂತೆ, ಬೇಷರತ್ತಾಗಿ ಸೇನೆ ಹಿಂಪಡೆಯುವಂತೆ ರಷ್ಯಾದ ಮೇಲೆ ಒತ್ತಡ ಹೇರುತ್ತಿದೆ.
ಕೆಲವು ರಾಷ್ಟ್ರಗಳು ರಷ್ಯಾದ ವಿಮಾಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿವೆ. ಗಡಿ ಭಾಗದ ನೆರೆಯ ರಾಷ್ಟ್ರಗಳು ರಷ್ಯಾದ ಹಡಗುಗಳು, ಸಬ್‍ಮೇರಿನ್, ನೌಕಾ ಸೇನೆಯ ವಾಹನಗಳಿಗೆ ಸಮುದ್ರ ಮಾರ್ಗದಲ್ಲೂ ಲಂಗರು ಹಾಕಲು ಅವಕಾಶ ನಿರಾಕರಿಸಿವೆ.
ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಷ್ಯಾ 36 ದೇಶಗಳ ವಿಮಾನಯಾನ ಸಂಚಾರವನ್ನೇ ಅಮಾನತುಗೊಳಿಸುವ ಮೂಲಕ ಸಡ್ಡು ಹೊಡೆದಿದೆ. ಬ್ರಿಟನ್, ಪೋಲ್ಯಾಂಡ್ ಸೇರಿದಂತೆ ಕೆಲವು ರಾಷ್ಟ್ರಗಳು ರಷ್ಯಾದ ಬ್ಯಾಂಕುಗಳ ಆರ್ಥಿಕ ವಹಿವಾಟಿಗೆ ತಡೆ ನೀಡಿವೆ. ತಮ್ಮಲ್ಲಿರುವ ರಷ್ಯಾದ ಚರಾಸ್ತಿಗಳನ್ನು ಜಪ್ತಿ ಮಾಡಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿವೆ.
ಮುಂದಿನ ದಿನಗಳಲ್ಲಿ ಇದು ಭಾರೀ ಪ್ರಮಾಣದ ಆರ್ಥಿಕ ಒತ್ತಡವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇದಕ್ಕಾಗಿ ಆರಂಭದಲ್ಲೇ ಎಚ್ಚೆತ್ತುಕೊಂಡಿರುವ ರಷ್ಯಾ ಅಧ್ಯಕ್ಷ ಪುಟಿನ್, ತನ್ನ ದೇಶದ ಪ್ರಜೆಗಳು, ಉದ್ಯಮಿಗಳಿಗೆ ರಫ್ತು, ಆಮದುದಾರರಿಗೆ ಮಹತ್ವದ ಸಲಹೆ ನೀಡಿದ್ದು, ವಿದೇಶಿ ವಿನಿಮಯದ ಶೇ.80ರಷ್ಟನ್ನು ರಷ್ಯಾದ ಕರೆನ್ಸಿ ರುಬೆಲ್‍ಗೆ ಪರಿವರ್ತಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಒಂದು ವೇಳೆ ಮುಂದಿನ ದಿನಗಳಲ್ಲಿ ಜಾಗತಿಕ ರಾಷ್ಟ್ರಗಳು ಯಾವುದೇ ನಿರ್ಬಂಧ ಹೇರಿದರೂ ಕೂಡ ಅದನ್ನು ಎದುರಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಉಳಿಸಿಕೊಳ್ಳಲು ರಷ್ಯಾ ಪೂರ್ವ ತಯಾರಿ ಮಾಡಿಕೊಂಡಿದೆ. ಈ ನಡುವೆ ಕ್ರೀಡಾ ಕ್ಷೇತ್ರದಲ್ಲೂ ನಿಷೇಧ ಹಾಗೂ ನಿರ್ಬಂಧದ ಸಮಸ್ಯೆಗಳು ಎದುರಾಗುತ್ತಿವೆ.
