ಅಮೆರಿಕದ ಅಲಾಸ್ಕಾ ಸಮುದ್ರದಲ್ಲಿ ರಷ್ಯಾದ ಸಬ್‌ಮರಿನ್ ಪ್ರತ್ಯಕ್ಷ..!

ಆಂಕಾರೇಜ್ (ಯುಎಸ್), ಆ.28- ರಷ್ಯಾದ ಸಮರ ಜಲಾಂತರ್ಗಾಮಿ ನೌಕೆಯೊಂದು ಅಲಾಸ್ಕಾ ಸಮುದ್ರದಲ್ಲಿ ಕಾಣಿಸಿಕೊಂಡಿದೆ ಎಂದು ಅಮೆರಿಕದ ಸೇನೆ ತಿಳಿಸಿದೆ.

ಅದು ಏಕೆ ಕಾಣಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ. ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಮತ್ತು ಯುಎಸ್ ನಾರ್ದರ್ನ್ ಕಮಾಂಡ್ ಪಡೆಯು ರಷ್ಯಾದ ಈ ಜಲಾಂತರ್ಗಾಮಿ ನೌಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಉತ್ತರ ಕಮಾಂಡ್ ಪಡೆಯು ವಕ್ತಾರ ಬಿಲ್ ಲೆವಿಸ್ ಹೇಳಿದ್ದಾರೆ.

ರಷ್ಯಾದ ನೌಕಾ ಪಡೆ ಅಥವಾ ಇತರ ನೌಕಾ ಪಡೆಗಳಿಂದ ಸಹಾಯಕ್ಕಾಗಿ ನಾವು ಯಾವುದೇ ವಿನಂತಿಗಳನ್ನು ಸ್ವೀಕರಿಸಿಲ್ಲ ಎಂದು ಕೊಲೊರಾಡೋದ ಪೀಟರ್ಸನ್ ವಾಯು ಪಡೆ ನೆಲೆಯಿಂದ ಲೂಯಿಸ್ ಹೇಳಿದರು.

ನಾವು ಯಾವಾಗಲೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಿದ್ಧರಿದ್ದೇವೆ. ಆದರೆ ನೌಕೆ ಅಂತಾರಾಷ್ಟ್ರೀಯ ಜಲ ಮಾರ್ಗದಲ್ಲಿದೆ. ಏನಾಗಿದೆ ಎಂಬುದು ನಮಗೂ ತಿಳಿದಿಲ್ಲ. ಹೆಚ್ಚಿನ ಮಾಹಿತಿಯನ್ನು ತಿಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ವಿದೇಶಿ ಸೇನಾ ನೌಕೆಗಳು , ಹಡಗುಗಳು ನಮ್ಮ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಷ್ಯಾ ಸಮರಾಭ್ಯಾಸ ನಡೆಸುತ್ತಿದ್ದು, ಅದರಿಂದಾಗಿ ಈ ನೌಕೆ ಬಂದಿರಬಹುದು ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.

ರಷ್ಯಾದ ಈ ಸಮರಾಭ್ಯಾಸದಿಂದ ನಮ್ಮ ಮೀನುಗಾರಿಕೆ ಹಡಗುಗಳು ಅಪಾಯದಲ್ಲಿ ಸಿಲುಕಿದ್ದವು ಎಂದು ಅಮೆರಿಕದ ವಾಣಿಜ್ಯ ಮೀನುಗಾರಿಕೆ ಹಡಗುಗಳ ಸಿಬ್ಬಂದಿಗಳು ಹೇಳಿದ್ದಾರೆ.

Sri Raghav

Admin