ಕ್ಯಿವ್,ಮಾ.2- ಯುದ್ಧ ಆರಂಭಗೊಂಡು ಆರು ದಿನ ಕಳೆದಿದ್ದು, ಉಕ್ರೇನ್‍ನ ರಾಜಧಾನಿ ಕ್ಯಿವ್‍ವನ್ನು ರಷ್ಯಾ ಬಹುತೇಕ ಆಕ್ರಮಿಸಿಕೊಂಡಿದೆ. ಎರಡನೇ ಬಹುದೊಡ್ಡ ನಗರ ಖರ್ಕಿವ್ ನಗರದಲ್ಲಿ ಇಂದು ರಷ್ಯನ್ ವಾಯುಪಡೆಯ ಪ್ಯಾರಾಟ್ರೂಪ್ಸ್ ಯೋಧರು ಇಳಿದಿದ್ದು, ಬಹುತೇಕ ಕೈವಶವಾಗುವ ಹಂತದಲ್ಲಿದೆ.
ಜಾಯ್‍ಟೋಮರ್ ಪ್ರದೇಶ ಕೂಡ ರಷ್ಯಾ ಆಕ್ರಮಣಕ್ಕೆ ತುತ್ತಾಗಿದೆ. ದೇಶಾದ್ಯಂತ ಸೆಲ್ ದಾಳಿ ಮುಂದುವರೆದಿದ್ದು, ರಣಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡಗಳು ದ್ವಂಸಗೊಳ್ಳುತ್ತಿದ್ದು, ಜೀವ ಹಾನಿ ಮಿತಿ ಮೀರುತ್ತಿದೆ. ಜಾಗತಿಕ ರಾಷ್ಟ್ರಗಳ ಬೆದರಿಕೆಗೂ ಜಗ್ಗದ ರಷ್ಯಾ ಉಕ್ರೇನ್‍ನನ್ನು ಕೈ ವಶ ಮಾಡಿಕೊಳ್ಳಲು ಹಂತ ಹಂತವಾಗಿ ಮುನ್ನುಗ್ಗುತ್ತಿದೆ. ಈ ನಡುವೆ 2ನೇ ಹಂತದ ಸಂಧಾನ ಮಾತುಕತೆ ಕೂಡ ಚಾಲ್ತಿಯಲ್ಲಿದೆ.
ನಿನ್ನೆ ಉಕ್ರೇನ್‍ನ ಕ್ಯಿವ್ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ರಷ್ಯಾ ಪಡೆ ಸುತ್ತುವರೆದು ನಿರ್ಣಾಯಕ ಯುದ್ಧಕ್ಕೆ ಸಜ್ಜುಗೊಂಡಿತ್ತು. ಉಕ್ರೇನ್ ಒಂದೊಂದು ಆಕ್ರಮಣವನ್ನು ಎದುರಿಸಲಾಗದೆ ತತ್ತರಿಸಿ ಹೋಗುತ್ತಿದೆ. ಉಕ್ರೇನ್ ಆಂತರಿಕ ಸಚಿವಾಲಯದ ಸಲಹೆಗಾರ ವ್ಯಾಡ್ಯುಂ ಡೆನ್ಸೇನ್ಕೋ ಮಾಧ್ಯಮಗಳ ಜತೆ ಮಾತನಾಡಿದ್ದು, ಉಕ್ರೇನ ದಕ್ಷಿಣ ಭಾಗದ ನಗರ ಕೆರೋಸನ್‍ನನ್ನು ರಷ್ಯಾ ಪ್ರವೇಶಿಸಿದೆ. ಹಲವು ಕಡೆ ವಾಯು ದಾಳಿ ಮುಂದುವರೆದಿದ್ದು, ಜೀವಹಾನಿಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಎಲ್ಲಾ ಸಾಧ್ಯತೆಗಳಿದ್ದರೂ ಕೂಡ ರಷ್ಯಾ ಪಡೆ ಕ್ಯಿವ್ ನಗರವನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಳ್ಳದೇ ಇರುವ ಬಗ್ಗೆ ಹಲವು ಚರ್ಚೆಗಳು ಶುರುವಾಗಿವೆ. ನಿನ್ನೆ ಇಡೀ ರಾತ್ರಿ ಕ್ಯಿವ್ ನಗರದ ಮೇಲೆ ವಿಮಾನಗಳ ಹಾರಾಟದ ಸದ್ದು ಬೋರ್ಗರೆದಿದೆ.
ಖರ್ಕಿವ್ ನಗರದಲ್ಲಿ ಇಳಿದಿರುವ ರಷ್ಯಾ ವಾಯುಸೇನೆ ಯೋಧರು ಸ್ಥಳೀಯ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
