ಬೆಂಗಳೂರು, ಸೆ.1- ಕಾಂಗ್ರೆಸ್‍ನಿಂದ ಮತ್ತೊಬ್ಬ ನಾಯಕರ ನಿರ್ಗಮನವಾಗುತ್ತಿದೆ. ತುಮಕೂರಿನ ಮಾಜಿ ಸಂಸದ ಹಾಗೂ ಹಿರಿಯ ನಾಯಕ ಎಸ್.ಪಿ.ಮುದ್ದಹನುಮೇಗೌಡ ಮತ್ತೆ ಪಕ್ಷ ತೊರೆಯುತ್ತಿದ್ದಾರೆ.ಬೆಂಗಳೂರಿನಲ್ಲಿಂದು ಮಾತನಾಡಿರುವ ಅವರು, ಇಂದು ಸಂಜೆಯ ಒಳಗೆ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ತುರುವೇಕೆರೆಯ ಮಾಜಿ ಶಾಸಕ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದ ಎಂ.ಡಿ.ಲಕ್ಷ್ಮೀ ನಾರಾಯಣ್ ನಿನ್ನೆಯಷ್ಟೆ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೆ ಎಸ್.ಪಿ.ಮುದ್ದಹನುಮೇಗೌಡರ ನಿರ್ಗಮನ ಕೈ ಪಡೆಗೆ ಮುಜುಗರ ಉಂಟು ಮಾಡಿದೆ.
ಈ ಮೊದಲು ಹತ್ತು ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಜಿಲ್ಲೆಯಲ್ಲಿನ ಒಳಜಗಳಗಳಿಂದ ಬೆಸತ್ತು ಜೆಡಿಎಸ್ ಸೇರ್ಪಡೆಯಾಗಿದ್ದರು, ಅಲ್ಲಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಪಕ್ಷಕ್ಕೆ ಮರಳಿದ್ದರು. ತುಮಕೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು. ಎಂಟಿ ಸ್ಪರ್ಧೆಗೆ ಉಭಯ ಪಕ್ಷಗಳು ನಿರ್ಧರಿಸದ್ದವು. ಆ ವೇಳೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧೆ ಮಾಡಿದ್ದರಿಂದ ಹಾಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿತ್ತು. ಮುಂದೆ ವಿಧಾನ ಪರಿಷತ್ ಅಥವಾ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸುವ ಭರವಸೆ ನೀಡಲಾಗಿತ್ತು.
ಆದರೆ ಈವರೆಗೂ ಯಾವ ಸ್ಥಾನಮಾನಗಳನ್ನು ನೀಡದ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಅಸಮಧಾನಗೊಂಡಿದ್ದು, ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಸ್ರ್ಪಸುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್‍ನಲ್ಲಿ 1989ರಿಂದಲೂ ಸಮಸ್ಯೆಯಾಗುತ್ತಲೇ ಇದೆ. ಆಗ ನನಗೆ ಬಿ-ಫಾರಂ ಕೊಟ್ಟು ಕೊನೆ ಕ್ಷಣದಲ್ಲಿ ಬೇರೊಬ್ಬರಿಗೆ ಸಿ-ಫಾರಂ ನೀಡಲಾಗಿತ್ತು. 2019ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಿಸಲು ಕೆಲವರ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಟಿಕೆಟ್ ನಿರಾಕರಿಸಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ನನ್ನೊಂದಿಗೆ ಮಾತನಾಡಿದರು, ಬಳಿಕ ಹೈಕಮಾಂಡ್ ನನ್ನೊಂದಿಗೆ ಯಾವ ಸಂಪರ್ಕವನ್ನು ಇಟ್ಟುಕೊಂಡಿಲ್ಲ. ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದ ನನಗೆ ಬೇಸರವಾಗಿದೆ.
ಅನಿವಾರ್ಯವಾಗಿ ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ, ಪಕ್ಷದಿಂದ ನನ್ನನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದರು.
ನಾನು ಪಕ್ಷದಿಂದ ಮಾನಸಿಕವಾಗಿ ದೂರು ಸರಿದಿದ್ದೇನೆ. ಮುಂದಿನ ಬಾರಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಕಾಂಗ್ರೆಸ್ ನನಗೆ ಈವರೆಗೂ ಸಾಕಷ್ಟು ಅವಕಾಶಗಳನ್ನು ನೀಡಿದೆ. ನಾನು ಅದಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.