7 ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಶಬರಿಮಲೆ ಅರ್ಜಿ ವರ್ಗಾವಣೆ

ನವದೆಹಲಿ, ನ.14- ವಿಶ್ವವಿಖ್ಯಾತ ಶಬರಿಮಲೆಯ ಶ್ರೀ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.

ಈ ಕುರಿತು ವಿಸ್ತೃತ ಪೀಠವು ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಇಂದು ಯಾವುದೇ ತಡೆಯಾಜ್ಞೆ ನೀಡಿಲ್ಲ. ಇದರಿಂದಾಗಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಮುಂದುವರಿಯಲಿದೆ.

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲ ವರ್ಗದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬಾರದೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆಗೆ ಅಂಗೀಕರಿಸಿತು. ಈ ಬಗ್ಗೆ ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠದಿಂದ ಪರಾಮರ್ಶೆ ನಡೆಸುವ ಅಗತ್ಯವಿದೆ.

ಹೀಗಾಗಿ ಈ ಅರ್ಜಿಗಳನ್ನು ಆ ಪೀಠಕ್ಕೆ ವರ್ಗಾಯಿಸುವುದಾಗಿ ರಂಜನ್ ಗೊಗೊಯಿ ತಿಳಿಸಿದರು. ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಕಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಈ ಪೀಠದಲ್ಲಿದ್ದರು. 3:2 ಬಹುಮತದಿಂದ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಯಿತು.

ಈ ತೀರ್ಪು ಹಿಂದೂ ಮಹಿಳೆಯರಿಗೆ ಮಾತ್ರ ಮೀಸಲಾಗಿಲ್ಲ. ಮಸೀದಿಗಳಿಗೂ ಮುಸ್ಲಿಂ ಮಹಿಳೆಯರಿಗೆ ಅವಕಾಶ ನೀಡಬೇಕೆಂಬ ವಿಚಾರವೂ ಸಹ ಇದರಲ್ಲಿದೆ. ವೈಯಕ್ತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನಡುವೆ ವಿವಾದ ಸೃಷ್ಟಿಯಾಗಿರುವುದು ಸಮಂಜಸವಲ್ಲ ಎಂದು ಮುಖ್ಯ ನ್ಯಾಯಮೂರ್ತಿಯವರು ಹೇಳಿದರು. ಏಳು ನ್ಯಾಯಮೂರ್ತಿಗಳನ್ನೊಳಗೊಂಡ ದೊಡ್ಡ ಪೀಠವು ಈ ಎಲ್ಲ ವಿಷಯಗಳನ್ನು ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಾಂವಿಧಾನಿಕ ಪೀಠ ತಿಳಿಸಿತು.

2018ರ ಸೆಪ್ಟೆಂಬರ್‍ನಲ್ಲಿ ಎಲ್ಲ ವಯೋಮಾನದ ಮಹಿಳೆಯರು ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಮರು ಪರಿಶೀಲನೆಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ದೇವಸ್ಥಾನದ ತಂತ್ರಿ ಹಾಗೂ ನಾಯರ್ ಸೇವಾ ಸಮಾಜ (ಎನ್‍ಎಸ್‍ಎಸ್) ಸೇರಿದಂತೆ ಹಲವಾರು ಸಂಘಟನೆಗಳು ಸುಪ್ರೀಂಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿ ತೀರ್ಪಿನ ಮರು ಪರಿಶೀಲನೆಗಾಗಿ ಯತ್ನಿಸಿದ್ದವು.

ಈ ವರ್ಷ ಫೆಬ್ರವರಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ತೀರ್ಪನ್ನು ಕಾಯ್ದಿರಿಸಿತ್ತು. ಈ ಕುರಿತ ಮಹತ್ವದ ತೀರ್ಪು ಕೂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನಿವೃತ್ತಿಗೂ ಮುನ್ನವೇ ವಿಚಾರಣೆಗೆ ಬಂದಿದೆ. 25 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸದಂತೆ ನಿರ್ಬಂಧಿಸುವುದು ಅಸಂವಿಧಾನಿಕ ಎಂದು ಕಳೆದ ಸೆಪ್ಟೆಂಬರ್‍ನಲ್ಲಿ ಸುಪ್ರೀಂಕೋರ್ಟ್ 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿತ್ತು.

ಇದನ್ನು ಪ್ರಶ್ನಿಸಿ ದೇವಸ್ಥಾನದ ತಂತ್ರಿ, ನಾಯರ್ ಸೇವಾ ಸಮಾಜ, ತಿರುವಾಂಕೂರ್ ದೈವಸ್ವಂ ಮಂಡಳಿ ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಇವೆಲ್ಲವನ್ನೂ ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠವು ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿವೆ.  ಮರುಪರಿಶೀಲನಾ ಅರ್ಜಿ ಕುರಿತು ಏಳು ನ್ಯಾಯಾಧೀಶರ ಪೀಠದಿಂದ ಹೊರಬೀಳುವ ತೀರ್ಪಿಗಾಗಿ ದೇಶಾದ್ಯಂತ ಇರುವ ಅಯ್ಯಪ್ಪ ಭಕ್ತರು ಮತ್ತು ಮಹಿಳಾ ಸಮುದಾಯ ಕಾತರದಿಂದ ಕಾಯುತ್ತಿದೆ.