ಚಿರತೆ ಸೆರೆ ಹಿಡಿಯಲು ಬೆಳಗಾವಿಗೆ ಆಗಮಿಸಿದ ಸಕ್ರೆಬೈಲ್ ಆನೆಗಳು

Social Share

ಬೆಳಗಾವಿ, ಆ.24- ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತ, ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತ ನಗರದ ಜನರ ನಿದ್ದೆಗೆಡಿಸಿರುವ ಚಿರತೆ ಸೆರೆಗಾಗಿ ಸಕ್ರೆಬೈಲ್‍ನಿಂದ ಆನೆಗಳ ತಂಡ ಆಗಮಿಸಿದೆ. ಆ.5ರಿಂದ ನಗರದ ಕ್ಲಬ್ ರಸ್ತೆಯ ಗಾಲ್ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಎಲ್ಲ ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ.

ಚಿರತೆ ಟ್ರ್ಯಾಪ್‍ಗಾಗಿ ಗಾಲ್‍ಕ್ಲಬ್ ಮೈದಾನದಲ್ಲಿ ಟ್ರ್ಯಾಪ್ ಕ್ಯಾಮೆರಾ ಅಳವಡಿಸಿದ್ದರು. ಅದರಲ್ಲಿ ಇಣಕಿ ನೋಡಿ ಮಾಯವಾಗುತ್ತಿತ್ತು. ಮತ್ತೆ ಕಳೆದ 22ರಂದು ಇಂಡಲಗ ರಸ್ತೆಯಲ್ಲಿರುವ ವನಿತಾ ವಿದ್ಯಾಲಯದ ಡಬ್ಬಲ್ ರೋಡ್‍ನಲ್ಲಿ ಮುಂಜಾನೆ ಬಸ್ ಚಾಲಕರೊಬ್ಬರ ಕಣ್ಣಿಗೆ ಚಿರತೆ ಕಾಣಿಸಿಕೊಂಡಿದ್ದು, ಅವರು ಮೊಬೈಲ್‍ನಲ್ಲಿ ಚಿರತೆ ಓಡಾಟವನ್ನು ಸೆರೆ ಹಿಡಿದಿದ್ದರು.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದ 22 ಶಾಲೆಗಳಿಗೆ ರಜೆ ನೀಡಲಾಗಿತ್ತು.
ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಕೂಂಬಿಂಗ್ ಆಪರೇಷನ್ ಆರಂಭಿಸಿದರೂ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇಲ್ಲಿಯವರೆಗೂ ಪತ್ತೆಯಾಗದ ಚಿರತೆ ಸೆರೆಗಾಗಿ ಅಂತಿಮವಾಗಿ ಆನೆಗಳ ಸಹಾಯ ಪಡೆಯಲಾಗುತ್ತಿದೆ.

ಸಕ್ರೆಬೈಲ್‍ನಿಂದ ಎರಡು ಆನೆಗಳನ್ನು ಕರೆತರಲಾಗಿದ್ದು, ಚಿರತೆ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ನಗರದ ಜನತೆಯ ನಿದ್ದೆಗೆಡಿಸಿರುವ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ಆನೆಗಳ ಸಹಾಯದಿಂದ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುತ್ತೇವೆ ಎಂದು ಜಿಲ್ಲಾಕಾರಿ ಡಾ.ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಕೂಡ 22 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದು, ಆನ್‍ಲೈನ್ ತರಗತಿಗಳನ್ನು ನಡೆಸುವಂತೆ ಆಡಳಿತ ಮಂಡಳಿಗಳಿಗೆ ಜಿಲ್ಲಾಕಾರಿಗಳು ಸೂಚನೆ ನೀಡಿದ್ದಾರೆ.

Articles You Might Like

Share This Article