ನ್ಯೂಯಾರ್ಕ್,ಆ.13- ವಿವಾದಿತ ಸಲ್ಮಾನ್ ರಶೀದ್ ಮೇಲೆ ಅಕ್ರಮಣ ಮಾಡಿದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ವಿಚಾರಣೆ ತೀವ್ರಗೊಂಡಿದೆ.ನ್ಯೂಜೆರ್ಸಿಯ ಫೇರ್ವ್ಯೂ ಪ್ರದೇಶದ ಹಾಡಿಮಾಥರ್(24)ನನ್ನು ಬಂಸಲಾಗಿದ್ದು, ಹತ್ಯೆ ಯತ್ನಕ್ಕೆ ನಿಖರವಾದ ಕಾರಣ ಪತ್ತೆಹಚ್ಚಲಾಗುತ್ತಿದೆ ಎಂದು ನ್ಯೂಯಾರ್ಕ್ ರಾಜ್ಯದ ಪೊಲೀಸ್ ಮುಖ್ಯಸ್ಥ ಯುಜಿನ್ ಸ್ಟಾನಿಸ್ಜೆವಿಸ್ಕಿ ತಿಳಿಸಿದ್ದಾರೆ.
ಹಾಡಿಮಾಥರ್ ಶಿಯಾ ತೀವ್ರವಾದಿಗಳ ಪರ ಅನುಕಂಪವುಳ್ಳವನಾಗಿದ್ದು, ಇರಾನ್ ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್(ಐಆರ್ಜಿಸಿ) ಪರವಾದ ವಾದ ಮಂಡಿಸುತ್ತಿದ್ದ ಎನ್ನಲಾಗಿದೆ. ನ್ಯೂಯಾರ್ಕ್ನ ಹೊರಭಾಗದಲ್ಲಿ ಚೌಟಕ್ವ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಲ್ಮಾನ್ ರಶೀದ್ ಭಾಷಣ ಮಾಡುವುದಿತ್ತು.
ಸಭಾಂಗಣದಲ್ಲಿ ಸುಮಾರು ಎರಡೂವರೆ ಸಾವಿರ ಮಂದಿ ಜಮಾವಣೆಗೊಂಡಿದ್ದರು. ಸಲ್ಮಾನ್ ರಶೀದ್ ತಮ್ಮ ಪರಿಚಯ ಮಾಡಿಕೊಳ್ಳುವ ಹಂತದಲ್ಲಿ ವೇದಿಕೆ ಮೇಲೇರಿದ ಆಗುಂತಕ ಸಲ್ಮಾನ್ ರಶೀದ್ ಅವರ ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ರಶೀದ್ರನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಅವರ ಒಂದು ಕಣ್ಣು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಕೈ ನರಗಳು ಕತ್ತರಿಸಿಹೋಗಿವೆ. ಯಕೃತ್ ಹಾನಿಗೊಳಗಾಗಿದೆ ಎಂದು ಆಪ್ತರು ತಿಳಿಸಿದ್ದಾರೆ.
ವಿವಾದಿತ ಪುಸ್ತಕದಿಂದಾಗಿ ಭಾರತ ತೊರೆದ ಸಲ್ಮಾನ್ ರಶೀದ್ ಬ್ರಿಟನ್ ಪೌರತ್ವ ಪಡೆದಿದ್ದರು. ಅಲ್ಲಿಂದ 20 ವರ್ಷಗಳ ಹಿಂದೆ ಅಮೆರಿಕಕೆ ತೆರಳಿ ನೆಲೆಸಿದ್ದರು. ಇವರ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.