ಮುಂಬೈ, ಆ.19- ಭಾರತೀಯ ಕಂದಾಯ ಸೇವೆ (ಐಆರ್‍ಎಸ್) ಅಧಿಕಾರಿ ಸಮೀರ್ ವಾಂಕಡೆ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಪ್ರಾಣ ಬೆದರಿಕೆ ಕೇಳಿ ಬಂದಿದೆ. ಎನ್‍ಸಿಬಿ ಅಧಿಕಾರಿಯಾಗಿದ್ದಾಗ ಬಾಲಿವುಡ್ ಸ್ಟಾರ್ ಶಾರುಕ್ ಖಾನ್‍ರ ಪುತ್ರ ಆರ್ಯನ್ ಖಾನ್‍ನನ್ನು ಐಶರಾಮಿ ಹಡಗಿನಲ್ಲಿ ಮಾದಕ ವಸ್ತು ಪಾರ್ಟಿ ನಡೆಸಿದ ಆರೋಪಕ್ಕಾಗಿ ಬಂಧಿಸಿ ಹೆಚ್ಚು ಪ್ರಚಲಿತರಾದ ಸಮೀರ್ ವಾಂಕಡೆ, ಇತ್ತೀಚೆಗೆ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣದಲ್ಲಿ ಕ್ಲಿನ್‍ಚೀಟ್ ದೊರೆತಿತ್ತು.
ಟ್ವಿಟರ್‍ನಲ್ಲಿ ಅಮನ್ ಎಂಬ ಖಾತೆಯಿಂದ ಆಗಸ್ಟ್ 14ರಂದು ಸಂದೇಶ ಬಂದಿದ್ದು, ನೀನು ಏನು ಮಾಡಿದ್ದೀಯಾ ಎಂದು ನಿನಗೆ ಗೋತ್ತಿದೆಯೇ ? ಅದಕ್ಕಾಗಿ ನೀನು ಬೆಲೆ ತೆರಬೇಕಿದೆ ಎಂದು ಬೆದರಿಕೆ ಹಾಕಲಾಗಿದೆ. ಮತ್ತೊಂದು ಸಂದೇಶದಲ್ಲಿ ನಿನ್ನನ್ನು ಮುಗಿಸುತ್ತೇವೆ ಎಂದು ಎಚ್ಚರಿಸಲಾಗಿದೆ.
ಈ ಸಂದೇಶಗಳನ್ನು ಆಧರಿಸಿ ಸಮೀರ್ ವಾಂಕಡೆ ಅವರು ಗುರೆಗಾಂವ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್‍ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪೊಲೀಸರು ಸಮೀರ್ ವಾಂಕಡೆ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಬೆದರಿಕೆ ಹಾಕಲಾಗಿರುವ ಖಾತೆಗೆ ಶೂನ್ಯ ಅನುಪಾಲಕರಿದ್ದಾರೆ. ಅದನ್ನು ವಾಂಕಡೇ ಅವರಿಗೆ ಬೆದರಿಕೆ ಹಾಕುವ ಸಲುವಾಗಿಯೇ ಸೃಷ್ಟಿಸಿದಂತಿದೆ.