ಅಕ್ರಮ ವರ್ಗಾವಣೆ ಪ್ರಕರಣ : ಹೈದರಾಬಾದ್ ಮೂಲಕ ಉದ್ಯಮಿ ಬಂಧನ

ನವದೆಹಲಿ, ಜು.27 (ಪಿಟಿಐ)- ವಿವಾದಿತ ಮಾಂಸ ರಫ್ತುದಾರ ಮೊಯಿನ್ ಖುರೇಷಿ ಮತ್ತು ಇತರರ ವಿರುದ್ಧ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಹೈದರಾಬಾದ್ ಮೂಲಕ ಉದ್ಯಮಿ ಸನಾ ಸತೀಶ್ ಬಾಬು ಅವರನ್ನು ಜಾರಿ ನಿರ್ದೇಶನಕಾಲಯದ(ಇಡಿ) ಅದಿಕಾರಿಗಳು ಬಂಧಿಸಿದ್ದಾರೆ.

ಅಕ್ರಮ ಹಣ ದುರ್ಬಳಕೆ ಪ್ರಕರಣದಲ್ಲಿ ಉದ್ಯಮಿ ಸತೀಶ್ ಬಾಬು ಈ ಹಿಂದೆ ಓರ್ವ ಸಾಕ್ಷಿದಾರರಾಗಿದ್ದರು. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಅವರು ಆರೋಪಿ ಎಂಬ ಕಾರಣಕ್ಕಾಗಿ ಬಂಧಿಸಿ ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಮತ್ತು ದುರ್ಬಲಕೆ ನಿಯಂತ್ರಣ ಕಾಯ್ದೆ (ಪಿಎಂಎಲ್‍ಎ) ಅಡಿ ನಿನ್ನೆ ರಾತ್ರಿ ಸತೀಶ್ ಅವರನ್ನು ಬಂಧಿಸಲಾಗಿದೆ. ಕಸ್ಟಡಿಯಲ್ಲಿ ಅವರನ್ನು ಕೆಲವು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಆದರೆ ಅವರು ಸಮರ್ಪಕ ರೀತಿಯಲ್ಲಿ ಸಹಕರಿಸದ ಕಾರಣ ಅವರನ್ನು ಮತ್ತೆ ಕೂಲಂಕಷವಾಗಿ ವಿಚಾರಣೆಗೆ ಗುರಿಪಡಿಸಲಾಗಿದೆ.

ಮೊಯಿನ್ ಖುರೇಷಿ ನಡೆಸುತ್ತಿದ್ದ ಕೆಲವು ಹಣಕಾಸು ವ್ಯವಹಾರಗಳಲ್ಲಿ ಸತೀಶ್ ಸಂಪರ್ಕ ಹೊಂದಿದ್ದು, ಕೆಲವು ಮಹತ್ವದ ಸಂಗತಿಗಳನ್ನು ಮರೆಮಾಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.