ಮರಳಿನ ದಿಬ್ಬ ಕುಸಿದು  ಮೂವರು ಮಕ್ಕಳ ದುರ್ಮರಣ

ಕೊಪ್ಪಳ, ಆ.28-ಆಟವಾಡುತ್ತಿದ್ದ ವೇಳೆ ಮರಳಿನ ದಿಬ್ಬ ಕುಸಿದ ಪರಿಣಾಮ ಮೂವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಕಾರ್ಮಿಕರ ಮಕ್ಕಳಾದ ಸೋನು (7), ಸವಿತಾ (4) ಮತ್ತು ಕವಿತಾ (2) ಮೃತಪಟ್ಟವರು.

ಕೊಪ್ಪಳ ಜಿಲ್ಲೆ, ಕನಕಗಿರಿ ತಾಲೂಕಿನ ನವಲಿ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆಂದು ಪುಣೆ ಮೂಲದ ಕಾರ್ಮಿಕ ಕುಟುಂಬಗಳು ಬಂದು ಇಲ್ಲಿ ನೆಲೆಸಿವೆ. ಇಂದು ಬೆಳಗ್ಗೆ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಇವರ ಮಕ್ಕಳು ಕಾರ್ಖಾನೆ ಸಮೀಪದಲ್ಲೇ ಆಟವಾಡುತ್ತಿದ್ದಾಗ ಮರಳಿನ ದಿಬ್ಬ ಕುಸಿದ ಪರಿಣಾಮ ಮೂವರು ಮಕ್ಕಳು ಮರಳಿನೊಳಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ಕನಕಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಕ್ಕಳ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.