ಸ್ಯಾಂಡಲ್‍ವುಡ್‍ಗೆ ಶುಕ್ರದೆಸೆ ಆರಂಭ..!

ಬೆಂಗಳೂರು,ಫೆ.4- ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಶುಕ್ರದೆಸೆ ಆರಂಭಗೊಂಡಿದೆ. ನಿನ್ನೆಯಷ್ಟೇ ರಾಜ್ಯ ಸರ್ಕಾರವು ಚಿತ್ರ ಪ್ರದರ್ಶನದ ವೇಳೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪೂರ್ಣ ಪ್ರಮಾಣದ ಪ್ರದರ್ಶನ ಮಾಡಬಹುದು ಎಂಬ ಗ್ರೀನ್‍ಸಿಗ್ನಲ್ ಕೊಟ್ಟ ಬೆನ್ನಲ್ಲೇ ಸ್ಟಾರ್ ನಟರುಗಳ ಚಿತ್ರಗಳ ಬಿಡುಗಡೆಗೆ ನಿರ್ಮಾಪಕರು ಹಾಗೂ ನಿರ್ದೇಶಕರು ಮನಸ್ಸು ಮಾಡಿದ್ದಾರೆ.

ನಿರ್ಮಾಪಕರು ಹಾಗೂ ನಿರ್ದೇಶಕರು ಸ್ಟಾರ್ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗಿರುವುದರಿಂದ ಚಂದನವನದಲ್ಲಿ ಮತ್ತೆ ರಮ್ಯಚೈತ್ರ ಕಾಲ ಆರಂಭವಾಗಿದೆ ಎಂದು ಹೇಳಬಹುದು. ಕೊರೊನಾಗೂ ಮುಂಚೆ ಸ್ಯಾಂಡಲ್‍ವುಡ್‍ನಲ್ಲಿ ವಾರಕ್ಕೆ ಏಳೆಂಟು ಚಿತ್ರಗಳು ಬಿಡುಗಡೆಯಾಗುತ್ತಿದ್ದವು, ಆದರೆ ಕೊರೊನಾ ಸಂಕಷ್ಟದಿಂದ ಚಿತ್ರ ಬಿಡುಗಡೆಗೂ ದುಸ್ತರವಾಗಿದ್ದರಿಂದ ಸ್ಟಾರ್ ನಟರ ಚಿತ್ರಗಳ ಬಿಡುಗಡೆ ಮಾಡಲು ನಿರ್ಮಾಪಕರು ಮನಸ್ಸು ಮಾಡದ್ದರಿಂದ ಚಿತ್ರಪ್ರದರ್ಶನಕ್ಕೆ ಗ್ರೀನ್‍ಸಿಗ್ನಲ್ ಸಿಕ್ಕರೂ ಹಿಂದಿನಂತೆ ಚಿತ್ರಮಂದಿರಗಳತ್ತ ಪ್ರೇಕ್ಷಕರ ಹಾಜರಿ ಎದ್ದು ಕಾಣುತ್ತಿರಲಿಲ್ಲ.

ಆದರೆ ನಾಳೆಯಿಂದ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಮತ್ತೆ ಕಳೆ ಕಟ್ಟಲಿದ್ದು ಒಂದೇ ದಿನ ನಾಲ್ಕು ಚಿತ್ರಗಳು ಬೆಳ್ಳಿಪರದೆಯ ಮೇಲೆ ರಾರಾಜಿಸಲಿರುವುದರಿಂದ ಪ್ರೇಕ್ಷಕರು ಕೂಡ ತಮ್ಮ ಮೆಚ್ಚಿನ ತಾರೆಗಳ ಚಿತ್ರವನ್ನು ನೋಡಲು ಚಿತ್ರಮಂದಿರಗಳತ್ತ ದಾಂಗುಡಿ ಇಡಲಿದ್ದಾರೆ.

ರವಿಗೌಡ ನಿರ್ದೇಶಿಸಿ ಮರಿಟೈಗರ್ ವಿನೋದ್‍ಪ್ರಭಾಕರ್, ಶೋಭಿತಾ ರಾಣಿ ನಟಿಸಿರುವ ಶ್ಯಾಡೋ, ಕ್ಷೌರಿಕನೊಬ್ಬನ ಕಥೆಯನ್ನು ಬಿಂಬಿಸುವ ಮಂಗಳವಾರ ರಜಾ ದಿನ ಚಿತ್ರವು ಇದೇ ವಾರ ಬೆಳ್ಳಿತೆರೆಗೆ ಬರಲಿದ್ದು, ಬಿಗ್‍ಬಾಸ್ ಖ್ಯಾತಿಯ ಚಂದನ್ ಆಚಾರ್, ಲಾಸ್ಯ ನಾಗರಾಜ್ ಮುಂತಾದವರು ನಟಿಸಿದ್ದಾರೆ.

ಇನ್ನು ಹೊಸಬರ ಚಿತ್ರ ಮಂಜ್ರಾ ಕೂಡ ಈ ವಾರ ಬೆಳ್ಳಿತೆರೆಗೆ ಬರುತ್ತಿದ್ದರೆ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್‍ದೇವರಾಜ್ ನಟನೆಯ ಇನ್ಸ್‍ಪೆಕ್ಟರ್ ವಿಕ್ರಂ ಕೂಡ ಇದೇ ವಾರ ಬಿಡುಗಡೆಯಾಗುತ್ತಿರುವುದರಿಂದ ಚಂದನವನದಲ್ಲಿ ಮತ್ತೆ ಬೆಳಕು ಮೂಡಲಿದೆ.

ಸಿನಿಮಾ ಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಕಡ್ಡಾಯವಾಗಿರುತ್ತದೆ. ಸ್ಯಾನಿಟೈಸರ್ ವ್ಯವಸ್ಥೆ ಅಳವಡಿಸಲು ಒತ್ತು ನೀಡಬೇಕು ಜೊತೆಗೆ ಥಿಯೇಟರ್ ಒಳಗೆ ಹೋಗುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಚಿತ್ರಮಂದಿರಗಳ ಮಾಲೀಕರು ಸುರಕ್ಷತೆಗೆ ಒತ್ತು ನೀಡಬೇಕಾಗಿದೆ.