ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕರಾಗಿ ಸಂಗಕ್ಕಾರ ನೇಮಕ

ಜೈಪುರ, ಜ. 25- ಶ್ರೀಲಂಕಾದ ತಂಡದ ಮಾಜಿ ಆಟಗಾರ ಕುಮಾರಸಂಗಕ್ಕಾರ ಅವರು ಮುಂಬರುವ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಐಪಿಎಲ್‍ನ ಪ್ರಥಮ ಆವೃತ್ತಿಯಲ್ಲೇ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದ ಆರ್‍ಆರ್ ಅಂದಿನಿಂದಲೂ ಫೈನಲ್‍ಗೇರಲು ತಿಣುಕಾಡುತ್ತಿದ್ದು ಈ ಬಾರಿಯಾದರೂ ಚಾಂಪಿಯನ್ ಪಟ್ಟ ಅಲಂಕರಿಸಬೇಕೆಂಬ ಉದ್ದೇಶದಿಂದ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ.

ಈಗಾಗಲೇ ತಂಡದ ನಾಯಕತ್ವದ ಹೊಣೆಯನ್ನು ಸಂಜುಸಮ್ಸನ್‍ಗೆ ವಹಿಸಿರುವ ಆರ್‍ಆರ್ ಫ್ರಾಂಚೈಸಿಗಳು ಈಗ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಲು ಕುಮಾರ ಸಂಗಕ್ಕಾರರನ್ನು ತಂಡದ ನಿರ್ದೇಶಕರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಕುಮಾರಸಂಗಕ್ಕಾರ ಅವರು ಇಂಗ್ಲೆಂಡ್‍ನ ಎಂಸಿಸಿ ಅಧ್ಯಕ್ಷರಾಗಿದ್ದು 2021ರ ಐಪಿಎಲ್‍ನಲ್ಲಿ ಆರ್‍ಆರ್ ತಂಡದ ನಿರ್ದೇಶಕರಾಗಿ ತಂಡದಲ್ಲಿ ಹೊಸ ರೂಪುರೇಷೆಗಳು, ತಂತ್ರಗಾರಿಕೆ, ಪ್ರತಿಭಾವನ್ವೇಷಣೆ ಮೂಲಕ ತಂಡದ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕರಾಗಿರುವುದು ತುಂಬಾ ಸಂತಸ ತಂದಿದೆ, ತಂಡದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಗೆಲುವು ತಂದುಕೊಡಲು ಪ್ರಯತ್ನಿಸುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಶ್ರೀಲಂಕಾ ತಂಡದ ಮಾಜಿ ನಾಯಕರಾಗಿದ್ದ ಕುಮಾರ ಸಂಗಕ್ಕಾರ ಅವರು 404 ಏಕದಿನ ಪಂದ್ಯಗಳಿಂದ 14234 ರನ್, 56 ಅರ್ಧಶತಕ, 25 ಶತಕ, 134 ಟೆಸ್ಟ್ ಪಂದ್ಯಗಳಿಂದ 12400 ರನ್, 38 ಶತಕಗಳ ಸಿಡಿಸಿದ್ದಾರೆ.

ಐಪಿಎಲ್‍ನಲ್ಲಿ ಡೆಕ್ಕನ್ ಚಾರ್ಜರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‍ರೈಸರ್ಸ್ ಹೈದ್ರಾಬಾದ್ ತಂಡಗಳ ಪರ ಆಡಿರುವ ಸಂಗಕ್ಕಾರ 71 ಪಂದ್ಯಗಳಿಂದ 1687 ರನ್ ಗಳಿಸಿದ್ದಾರೆ.