ಬೆಂಗಳೂರು,ಜ.26- ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಯೋಧ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಹಾಕಲು ಆದೇಶ ಹೊರಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದರು. ನಗರದ ಮೆಜೆಸ್ಟಿಕ್‍ನಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಯಣ್ಣನ ಶೌರ್ಯ, ದೇಶಭಕ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಅವರ ಭಾವಚಿತ್ರವನ್ನು ಅಳವಡಿಸಲಾಗುವುದು . ಇಂದೇ ಇದಕ್ಕೆ ಅದೇಶ ಹೊರಡಿಸುವುದಾಗಿ ಹೇಳಿದರು.
ಇಷ್ಟು ವರ್ಷಗಳಿಂದ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ತರ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ರಾಯಣ್ಣ ಅವರ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ವೀರರಾಣಿ ಕಿತ್ತೂರು ಚನ್ಮಮ್ಮ ಹಾಗೂ ರಾಯಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಈ ಎರಡು ಪ್ರತಿಮೆಗಳನ್ನು ಮಾಡುವವರ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಸುವರ್ಣ ಸೌಧದ ಮುಂಭಾಗ ಕಿತ್ತೂರು ರಾಣಿ ಚನ್ನಮ್ಮ, ಬಲಗೈ ಭಂಟ ರಾಯಣ್ಣನ ಪ್ರತಿಮೆಯನ್ನು ಅನಾವರಣ ಮಾಡಿದರೆ ಹೆಚ್ಚು ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಸಾಹಸ, ಧೈರ್ಯ ಅವರ ಆದರ್ಶಗಳನ್ನು ಜೀವಂತವಿಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಸುಮಾರು 180 ಕೋಟಿ ವೆಚ್ಚದಲ್ಲಿ ರಾಯಣ್ಣನ ಮಿಲಿಟರಿ ಸ್ಕೂಲ್ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಇದಕ್ಕೆ 55 ಕೋಟಿ ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಶಾಲಾ ಕಟ್ಟಡದ ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಆಹ್ವಾನಿಸಲಾಗುವುದು. ಕಾಮ ಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿರುವುದಾಗಿ ವಿವರಿಸಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಸರಕಾರ ಕ್ರಮ ತೆಗೆದುಕೊಳ್ಳಲಿದೆ. ಕಿತ್ತೂರು ರಾಣಿ ಚೆನ್ನಮ ಮೂರ್ತಿ ದೆಹಲಿಯಲ್ಲಿದೆ. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಅಲ್ಲಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ. ಸೂಕ್ತ ಸ್ಥಳ ಹುಡುಕುತ್ತೇವೆ. ರಾಯಣ್ಣನ ಪ್ರತಿಮೆ ದೆಹಲಿಯಲ್ಲಿ ಸ್ಥಾಪಿಸುತ್ತೇವೆ. ಎಲ್ಲೆಲ್ಲಿ ಕಿತ್ತೂರು ರಾಣಿ ಪ್ರತಿಮೆಗಳಿವೆಯೋ ಅಲ್ಲೆಲ್ಲ ರಾಯಣ್ಣನವರ ಪ್ರತಿಮೆಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗಿಂತ ಅಪ್ರತಿಮ ವೀರ ಮತ್ತೊಬ್ಬರಿಲ್ಲ. ಬ್ರಿಟಿಷರ ವಿರುದ್ಧ ತನ್ನ ಪ್ರಾಣವನ್ನು ಲೆಕ್ಕಿಸದೆ ದೇಶಕ್ಕಾಗಿ ಹೋರಾಟ ನಡೆಸಿದ ಮಹಾಸೇನಾನಿ. ಬ್ರಿಟಿಷರ ಪಾಲಿಗೆ ಆತ ಸಿಂಹಸ್ವಪ್ನವಾಗಿದ್ದ ಎಂದು ಕೊಂಡಾಡಿದರು.
ಬ್ರಿಟಿಷರ ತಂತ್ರ, ಕುತಂತ್ರಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಜಗ್ಗಲಿಲ್ಲ. ರಾಯಣ್ಣನ ಧೈರ್ಯ ವೇ ಅವರಿಗೆ ಶಕ್ತಿಯಾಗಿತ್ತು. ಮೋಸದಿಂದ ರಾಯಣ್ಣನನ್ನು ಬ್ರಿಟಿಷರು ಸೆರೆ ಹಿಡಿದರು. ಆದರೂ ಇತಿಹಾಸದ ಪುಟದಲ್ಲಿ ಅವರು ಶಾಶ್ವತವಾಗಿ ಉಳಿದಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
