10 ದಿನ ಸಂಜೀವಿನಿ ಸರಸ್ ಮೇಳ: ಸಚಿವ ಅಶ್ವಥ್ ನಾರಾಯಣ

ಬೆಂಗಳೂರು,ಏ.6- ಸ್ವಸಹಾಯ ಗುಂಪುಗಳ ಕಿರು ಉದ್ಯಮಗಳನ್ನು ಉತ್ತೇಜಿಸುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ರಾಷ್ಟ್ರಮಟ್ಟದ ಬೃಹತ್ ಸಂಜೀವಿನಿ ಸರಸ್ ಮೇಳವನ್ನು ಇದೇ 8ರಿಂದ 18ರವರೆಗೆ 10 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಚಿವ ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಸ್ವಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಇದಾಗಿದ್ದು, ಇದರಲ್ಲಿ ರಾಜ್ಯದ 150 ಮಳಿಗೆ ಹಾಗೂ ಇತರೆ ರಾಜ್ಯಗಳ 160 ಮಳಿಗೆ ಸೇರಿದಂತೆ ಒಟ್ಟು 300ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕಿರು ಉದ್ಯಮಿದಾರರ ಉತ್ಪನ್ನಗಳು ಮಾರಾಟವಾಗಲಿವೆ ಎಂದರು.

ಇದರಿಂದ ಮಹಿಳಾ ಉದ್ದಿಮೆದಾರರಿಗೆ ಅವರ ಕೌಶಲ್ಯ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸುವ ಸದಾವಕಾಶದೊಂದಿಗೆ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ದೊರೆಯುತ್ತದೆ. ಮೇಳವನ್ನು ಏ.8ರಂದು ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದಾಟಿಸಲಿದ್ದಾರೆ ಎಂದರು.
ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಕಿರು ಉದ್ದಿಮೆದಾರರಿದ್ದು, ಈ ವರ್ಷ ಜೀವನೋಪಾಯ ವರ್ಷವೆಂದು ಘೋಷಿಸಲಾಗುತ್ತಿದ್ದು, 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕಿರು ಉದ್ದಿಮೆದಾರರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು, ಕೈಯಿಂದ ಮಾಡಿದ ವಸ್ತುಗಳಿಗೆ(ಕರಕುಶಲ) ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಆನ್‍ಲೈನ್ ಮಾರಾಟ ಕಂಪನಿಗಳಾದ ಅಮೇಜಾನ್, ಫ್ಲಿಪ್‍ಕಾರ್ಟ್‍ನೊಂದಿಗೂ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಜೀವನೋಪಾಯ ಇಲಾಖೆ ತನ್ನ ವಹಿವಾಟನ್ನು ಡಿಜಿಟಲೀಕರಣ ಮಾಡುವ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ವಿವರಿಸಿದರು.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸ್ವಸಹಾಯ ಗುಂಪುಗಳ ಸದಸ್ಯರಲ್ಲಿ ಕಿರು ಉದ್ದಿಮೆಗಳನ್ನು ಉತ್ತೇಜಿಸುವ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ವೃದ್ದಿಸುವುದು ಅಭಿಯಾನದ ಪ್ರಮುಖ ಕಾರ್ಯತಂತ್ರ. ಈ ನಿಟ್ಟಿನಲ್ಲಿ ಈ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ರಾಜ್ಯಾದ್ಯಂತ ವಿವಿಧ ಮಾದರಿಯ ವ್ಯಾಪಾರ ಮೇಳಗಳನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು.

ನಗರದ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಳ ಆಯೋಜಿಸಲಾಗಿದ್ದು, ಮೇಳಕ್ಕೆ ಉಚಿತ ಪ್ರವೇಶವಿದೆ. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಬ್ಯಾಂಕ್ ಸೇವೆಗಳ ಮಾಹಿತಿಯನ್ನು ಒದಗಿಸುವ ಮಳಿಗೆಗಳು ಇರಲಿವೆ.

ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ವಸತಿ ಮತ್ತು ನಗರ ವ್ಯವಹಾರ ಇಲಾಖೆ ಸಹಯೋಗದಲ್ಲಿ ನಡೆಯುವ ಮೇಳದಲ್ಲಿ ಭಾಗವಹಿಸುವ ಮಹಿಳೆಯರ ಕೌಶಲ್ಯ ಸುಧಾರಿಸಲು ತರಬೇತಿ ಕಾರ್ಯಗಾರ ಹಾಗೂ ಸ್ಪೂರ್ತಿ ಅವೇಶನವನ್ನು ನಡೆಸಲಾಗುತ್ತಿದೆ. ಕಾಪೆರ್ರೇಟ್‍ಗಳೊಂದಿಗೆ ದುಂಡುಮೇಜಿನ ಸಭೆ, ಖರೀದಿದಾರರ ಸಭೆ , ಸ್ಟಾರ್ಟಪ್ ಈ ಯೋಜನೆಯ ಪ್ರಮುಖ ಭಾಗವಹಿಸಲಿವೆ ಎಂದರು.

ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರಾದ ಮಂಜುಶ್ರೀ ಅಭಿಯಾನದ ಚೀಫ್ ಆಪರೇಟರ್ ಸ್ವರೂಪ , ಪ್ರಾಜೆಕ್ಟ್ ಅಕಾರಿ ಸುಮತಿ, ಉಪನಿರ್ದೇಶಕರಾದ ನಯಾ ಹಾಜರಿದ್ದರು.