ಬೆಂಗಳೂರು,ಫೆ.28-ಕನ್ನಡದ ತತ್ವಪದಗಳಿಗೆ ವಿಶಿಷ್ಟ ಛಾಪು ಮೂಡಿಸಿ, ಜನಮನದಲ್ಲಿ ಅಚ್ಚೊತ್ತಿರುವ ಸಂತ ಶಿಶುನಾಳ ಶರೀಫರು ಸೌಹಾರ್ದತೆಯ ಸಂಕೇತವಾಗಿದ್ದು ಅವರ ಹುಟ್ಟುಹಬ್ಬವನ್ನು ಸರ್ಕಾರ ಆಚರಿಸಬೇಕು ಎಂದು ರಂಗೋತ್ರಿ ಸಂಸ್ಥಾಪಕ ಅಧ್ಯಕ್ಷ ಕೆ.ಎಚ್. ಕುಮಾರ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟ ( ಟ್ರಸ್ಟ್ ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು. ಸಹಕಾರದೊಂದಿಗೆ ಲಿಂಗರಾಜಪುರದ ನಾಟ್ಯ ರಂಜಿನಿ ಕಲಾಕ್ಷೇತ್ರ ಹಮ್ಮಿಕೊಂಡಿದ್ದ ಸಂತ ಶಿಶುನಾಳ ಶರೀಫರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಹಲವಾರು ಸಾಧಕ ಸಂತರ, ಸಾಹಿತಿಗಳ, ಕಲಾವಿದರ ಹುಟ್ಟುಹಬ್ಬವನ್ನು ಸರ್ಕಾರ ಆಚರಿಸುತ್ತಿದೆ. ಶಿಶುನಾಳ ಶರೀಫರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವ ಸರಕಾರ, ಅವರ ಹುಟ್ಟುಹಬ್ಬ ಆಚರಣೆಯನ್ನು ಘೋಷಿಸಬೇಕು. ಇದು ನಮ್ಮ ಹಲವು ವರ್ಷಗಳ ಬೇಡಿಕೆಯಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಶುನಾಳ ಷರೀಫ ಅವರ ಕರ್ಮಭೂಮಿಯ ಜಿಲ್ಲೆಯವರೆ ಆಗಿದ್ದು ಈ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿಕೊಂಡರು.ಕವಯಿತ್ರಿ ಡಾ.ಪ್ರಿಯದರ್ಶಿನಿ ಮಾತನಾಡಿ, ಶಿಶುನಾಳರ ಹುಟ್ಟಿದ ಸ್ಥಳವನ್ನು ಪ್ರವಾಸಿ ತಾಣವಾಗಿ ಮಾಡಿ, ವಿದ್ಯಾರ್ಥಿಗಳು, ಯುವಜನತೆಗೆ ಅವರ ತತ್ವಪದ ಹಾಗೂ ಅವರ ಬದುಕಿನ ಚಿತ್ರಣದ ಪರಿಚಯ ಮಾಡಿಕೊಡಲು ಸರ್ಕಾರ, ಅಕಾಡೆಮಿಗಳು ಮುಂದೆ ಬರಬೇಕು ಎಂದು ಆಶಿಸಿದರು. ಯೋಗಶ್ರೀ ವರ್ಧಮಾನ್ ಕಳಸೂರು, ಸೇತುರಾಮ್, ವಿದುಷಿ ಗೀತಾ ಶ್ರೀನಾಥ್, ವೇಣುಗೋಪಾಲ, ಕೆ. ವಿ ಗೌಡ ಮತ್ತಿತರರು ಭಾಗವಹಿಸಿದ್ದರು.
