ರಾಜ್ಯದ ಮತದಾರರಿಗೆ ನ್ಯಾ.ಸಂತೋಷ್ ಹೆಗ್ಡೆ ಸಂದೇಶ : ವಿಶೇಷ ಸಂದರ್ಶನ

Social Share

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಮತ ಚಲಾಯಿಸದೆ ಸಮಾಜ ಸೇವೆ ಮಾಡುವಂತಹ ಯೋಗ್ಯರನ್ನು ಆಯ್ಕೆ ಮಾಡಿ ಎಂದು ನಿವೃತ್ತ ಲೋಕಾಯುಕ್ತರಾದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.

ಈ ಸಂಜೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಅವರು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಹಿನ್ನಲೆ, ಚುನಾಯಿತರಾದರೆ ಸಮಾಜಸೇವೆ ಮಾಡುವ ವಿಶ್ವಾಸ ಉಳ್ಳವರಿಗೆ, ಸಮಾಜಕ್ಕೆ ಅವರಿಂದ ಲಾಭ ಆಗುವುದಾದರೆ ಮಾತ್ರ ಮತ ಹಾಕಿ. ಚುನಾವಣಾ ಕಣದಲ್ಲಿ ಅಂಥವರು ಯಾರೂ ಇಲ್ಲ ಎಂದಾದರೆ ನೋಟಾ ಚಲಾಯಿಸಿ ಎಂದು ಸಲಹೆ ಮಾಡಿದರು.

ಚುನಾವಣೆ ಸಂದರ್ಭದಲ್ಲಿ ವಿವಿಧ ರೀತಿಯ ಆಮಿಷವೊಡ್ಡಿ ಮತದಾರರನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನೆಯಾಗಬೇಕು. ಜನರು ಜಾಗೃತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಗಮನಹರಿಸಬೇಕು.
ಚುನಾವಣೆ ಸಂದರ್ಭದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತದೆ. ಅವಧಿಗೂ ಮುನ್ನವೇ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡುತ್ತಾರೆ. ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚಾಗಿ ರಾಜಕೀಯಕ್ಕೆ ಬರಲು ಬಹಳಷ್ಟು ಮಂದಿ ಇಚ್ಚಿಸುತ್ತಾರೆ. ರಾಜಕೀಯದಲ್ಲಿ ದೊರೆಯುವ ಲಾಭಕ್ಕಾಗಿಯೇ ಹೆಚ್ಚ ಆಕರ್ಷಿತರಾಗುತ್ತಾರೆ ಎಂದು ನುಡಿದರು.

ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದ ಸಂದರ್ಭದಲ್ಲಿ ತಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರವನ್ನು ಅಂದಿನ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಆ ಅವಕಾಶವೂ ರಾಜಕೀಯ ಒತ್ತಡದಿಂದ ಕೈತಪ್ಪಿತು ಎಂದರು.

ಸಾಮಾಜಿಕ ಹೋರಾಟಗಾರರಾದ ಅಣ್ಣಾ ಹಜಾರೆ ಅವರೊಂದಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವಾಗ ಆಮ್ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂದಿತು. ಆ ಸಂದರ್ಭದಲ್ಲೂ ರಾಜಕೀಯ ಪ್ರವೇಶಕ್ಕೆ ಆಹ್ವಾನ ಬಂದಿತ್ತು. ಆದರೆ ಈ ಎರಡೂ ಸಂದರ್ಭದಲ್ಲೂ ತಮಗೆ ರಾಜಕೀಯ ಪ್ರವೇಶ ಮಾಡುವ ಇಚ್ಛೆ ಇರಲಿಲ್ಲ. ಹೀಗಾಗಿ ರಾಜಕೀಯದಿಂದ ದೂರ ಉಳಿದಿರುವುದಾಗಿ ಹೇಳಿದರು.

ನಿವೃತ್ತ ನ್ಯಾಯಾೀಧಿಶರನ್ನು ರಾಜ್ಯಪಾಲರ ಹುದ್ದೆಗೆ ನೇಮಕ ಮಾಡುವುದರಲ್ಲಿ ತಪ್ಪಿಲ್ಲ. ಈ ಹಿಂದೆಯೂ ಈ ರೀತಿಯ ನೇಮಕಗಳು ಆಗಿವೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು ರಾಜ್ಯಪಾಲರಾಗುತ್ತಿರುವಾಗ ನ್ಯಾಯಾ
ೀಧಿಶರು ಏಕೆ ಆಗಬಾರದು ಎಂದು ಅವರು ಪ್ರಶ್ನಿಸಿದರು.

ಲೋಕಾಯುಕ್ತಕ್ಕೆ ರಾಜೀನಾಮೆ: ತಾವು ಲೋಕಾಯುಕ್ತರಾಗಿದ್ದ ಸಂದರ್ಭದಲ್ಲಿ ತಮ್ಮೊಂದಿಗೆ ಸೇವೆ ಸಲ್ಲಿಸಿದ್ದ ಅರಣ್ಯಾಧಿಕಾರಿಯೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಯಿತು. ಅಮಾನತು ರದ್ದುಪಡಿಸಲು ಆಗಿನ ಮುಖ್ಯ ಕಾರ್ಯದರ್ಶಿ ನಿರಾಕರಿಸಿದಾಗ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೆ ಎಂದರು.

ರಾಜೀನಾಮೆ ನೀಡಿದ ವಿಚಾರ ಆಡಳಿತಾರೂಢ ಪಕ್ಷದ ಕೇಂದ್ರ ನಾಯಕರಿಗೆ ತಲುಪಿ ಅವರ ನಿರ್ದೇಶನದ ಮೇರೆಗೆ ಲೋಕಾಯುಕ್ತ ಹುದ್ದೆಗೆ ಆಗಿನ ಆ ಅಧಿಕಾರಿಯ ಅಮಾನತನ್ನು ತೆರವುಗೊಳಿಸಿದ ಪತ್ರ ನೀಡಿದ ನಂತರ ಲೋಕಾಯುಕ್ತ ಹುದ್ದೆಗೆ ನೀಡಿದ ರಾಜೀನಾಮೆ ಪತ್ರವನ್ನು ಹಿಂದಕ್ಕೆ ಪಡೆಯಲಾಯಿತು.

ತಮ್ಮ ಅೀಧಿನದಲ್ಲಿ ಕೆಲಸ ಮಾಡುವ ಅಧಿಕಾರಿಯ ಹಿತರಕ್ಷಣೆ ಮಾಡದಿದ್ದರೆ ಲೋಕಾಯುಕ್ತ ಸ್ಥಾನದಲ್ಲಿ ನಾನು ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂಬ ಉದ್ದೇಶವಾಗಿತ್ತು. ತಾವು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಆಡಳಿತದಿಂದ ಜನರಿಗಾಗುತ್ತಿದ್ದ ಅನ್ಯಾಯ ತಪ್ಪಿಸುವ ಪ್ರಯತ್ನ ಮಾಡಲಾಯಿತು. ಎಲ್ಲಾ ರಂಗಕ್ಕೂ ಸಮಾಜದಿಂದಲೇ ಬರುವುದು.

ಹೀಗಾಗಿ ಸಮಾಜದ ಭಾವನೆ ಬದಲಾದರೆ ಸಮಾಜ ಸುಧಾರಣೆಯೂ ಸಾಧ್ಯವಾಗುತ್ತದೆ. ಇದಕ್ಕೆ ಮನೆ ಮತ್ತು ಶಾಲೆಯಿಂದಲೇ ಮಕ್ಕಳಿಗೆ ಸರಿಯಾದ ಮಾರ್ಗ ತೋರಿಸಿಕೊಡಬೇಕು ಎಂದು ಹಿತನುಡಿದರು.

ತಂದೆ-ತಾಯಿ ಸರಿತಪ್ಪುಗಳನ್ನು ಮಕ್ಕಳಿಗೆ ತಿಳಿ ಹೇಳಬೇಕು. ಶಾಲೆಯಲ್ಲಿ ನೀತಿ ಪಾಠದ ಮೂಲಕ ಸನ್ಮಾರ್ಗದಲ್ಲಿ ಹೋಗುವುದನ್ನು ಕಲಿಸಬೇಕು. ಆಡಳಿತ ವ್ಯವಸ್ಥೆಯ ನಿಯಂತ್ರಣ ಚುನಾಯಿತ ಪ್ರತಿನಿಧಿಗಳ ಕೈಯಲ್ಲೇ ಇದೆ. ಅವರ ನಿರ್ದೇಶನದಂತೆ ಆಡಳಿತ ನಡೆಯುತ್ತಿದೆ ಎಂದು ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ- ನಿಯಂತ್ರಣ ಸಾಧ್ಯ: ಸಮಾಜದಲ್ಲಿ ಸಾಕಷ್ಟು ಆಳವಾಗಿ ಬೇರೂರಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಣ ಮಾಡಬಹುದು. ಕಾಲ ಕಳೆದಂತೆ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭ್ರಷ್ಟಾಚಾರಕ್ಕೆ ಮೂಲ ಕಾರಣ ದುರಾಸೆ. ದುರಾಸೆಯಿಂದಲೇ ಬೇರೆ ಬೇರೆ ಮಾರ್ಗದ ಮೂಲಕ ಹಣ ಗಳಿಸಿ ಶ್ರೀಮಂತರಾಗಲು ಬಯಸುತ್ತಾರೆ. ಅಧಿಕಾರವುಳ್ಳವರಿಗೆ, ಶ್ರೀಮಂತರಿಗೆ ಸಲಾಮು ಹೊಡೆಯು ವುದು ಜನರೇ ಅಲ್ಲವೇ? ಎಂದು ಪ್ರಶ್ನಿಸಿದರು.

ದೊಡ್ಡ ಹುದ್ದೆ ಪಡೆಯಬೇಕು, ಶ್ರೀಮಂತರಾಗಬೇಕು ಎಂಬುದು ತಪ್ಪಲ್ಲ. ಆದರೆ ಕಾನೂನಿನ ಚೌಕಟ್ಟಿನಲ್ಲೇ ಪಡೆಯಬೇಕು. ಇನ್ನೊಬ್ಬರ ಜೇಬಿಗೆ ಕೈ ಹಾಕುವ, ಬೇರೊಬ್ಬರ ಹೊಟ್ಟೆ ಮೇಲೆ ಹೊಡೆದು ಶ್ರೀಮಂತರಾದರೆ ತೃಪ್ತಿ ಸಿಗುವುದಿಲ್ಲ ಎಂದರು.

ಭ್ರಷ್ಟಾಚಾರ ಎಂಬುದು ಸಾಮಾಜಿಕ ಸಮಸ್ಯೆಯಾಗಿದೆ. ಹೀಗಾಗಿ ಮೌಲ್ಯಗಳು ಕುಸಿಯುತ್ತಿವೆ. ನಮ್ಮ ಹಿರಿಯರು ಕಟ್ಟಿರುವ ಮೌಲ್ಯಗಳು ಉಳಿಯಬೇಕಾದರೆ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಹುಟ್ಟಿದ ಮೇಲೆ ಮಾನವೀಯ ಮೌಲ್ಯಗಳೊಂದಿಗೆ ಬದುಕಬೇಕು. ಮಾನವನಾಗಿ ಸತ್ತರೆ ಸಿಗುವ ಗೌರವ ಅದಕ್ಕಿಂತ ಮತ್ತೊಂದು ಇಲ್ಲ. ಇದಕ್ಕೆ ಹಣದ ಅಗತ್ಯ ಉಂಟಾಗುವುದಿಲ್ಲ ಎಂದು ಸಂತೋಷ್ ಹೆಗ್ಡೆ ಹೇಳಿದರು.

Santosh Hegde, former judge, Lokayukta, Karnataka,

Articles You Might Like

Share This Article