ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

Spread the love

ಬೆಳಗಾವಿ, ಏ.21- ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, 108 ಕಾಮಗಾರಿಗೆ ಅನುಮೋದನೆ ನೀಡುವಂತೆ ಬರೆದಿರುವ ಪತ್ರ ಪೊಲೀಸರಿಗೆ ಲಭ್ಯವಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಉಡುಪಿ ಪೊಲೀಸರು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದು, ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸಂತೋಷ್ ಪಾಟೀಲ್‍ಗೆ ಹಣ ನೀಡಿದ್ದ ನಾಗೇಶ್, ಅದಕ್ಕೆ ಪ್ರತಿಯಾಗಿ ಮನೆಯನ್ನು 3 ಲಕ್ಷ ರೂ.ಗೆ ಜಿಪಿಎ ಮಾಡಿ ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮನೆ ಜಿಪಿಎ, ಕಾಮಗಾರಿ ಬಿಲ್ ಆಗದಿರುವುದು ಸೇರಿದಂತೆ ಒತ್ತಡಕ್ಕೆ ಸಿಲುಕಿದ್ದ ಸಂತೋಷ್ ಆತ್ಮಹತ್ಯೆ ನಿರ್ಧಾರ ಮಾಡಿದರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಈ ಮಧ್ಯೆ ಇದೀಗ ಆಗಿನ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಒಳಚರಂಡಿ ಸೇರಿದಂತೆ 108 ಅಭಿವೃದ್ಧಿಗಾಗಿ ಕಾಮಗಾರಿಗೆ ಅನುಮೋದನೆ ನೀಡುವಂತೆ ಬರೆದಿದ್ದ ಪತ್ರ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಾಮಗಾರಿಗೆ ಅನುಮೋದನೆ ನೀಡುವಂತೆ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಪತ್ರ ಬರೆದಿದ್ದು, 2021 ಫೆ.26ರಂದು ಅನುಮೋದನೆಗೆ ಆದೇಶಿಸಲಾಗಿದೆ. ಮಾ.5ರಂದು ಆದೇಶದ ಪ್ರತಿ ನೀಡಲಾಗುವುದು ಬರೆದು ಇಲಾಖೆಯಿಂದ ಸಹಿ ಕೂಡ ಹಾಕಲಾಗಿದೆ. ಆದರೆ ಕಾಮಗಾರಿಗೆ ಅನುಮೋದನೆ ಸಿಕ್ಕಿಲ್ಲ, ಅನುಮೋದನೇ ಇಲ್ಲದೇ ಸಂತೋಷ್ ಕೆಲಸ ಮಾಡಿದ್ದಾರೆ ಎಂದು ಸರ್ಕಾರ ವಾದಿಸಿದ್ದು, ಇಡೀ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.

Facebook Comments