ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣ ರಾಜಭವನ ಅಂಗಳದಲ್ಲಿ

Social Share

ಬೆಂಗಳೂರು,ಜು.15- ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿ ಸಚಿವ ಈಶ್ವರಪ್ಪನವರ ತಲೆದಂಡಕ್ಕೂ ಕಾರಣವಾಗಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಇದೀಗ ರಾಜಭವನ ಅಂಗಳಕ್ಕೆ ಕಾಲಿಟ್ಟಿದೆ.

ಪ್ರಕರಣ ಕುರಿತಂತೆ ಪೊಲೀಸರಿಂದ ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿ ಸಂತೋಷ್ ಪತ್ನಿ, ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್‍ಗೆ ಪತ್ರ ಬರೆದಿದ್ದು, ನಿಷ್ಪಕ್ಷ ಹಾಗೂ ಪಾರದರ್ಶಕ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ. ಕೇವಲ 15 ದಿನದಲ್ಲಿ ಈ ಪ್ರಕರಣದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಇದಕ್ಕೆ ಸಾಕ್ಷಿ ಎಂದು ಸಂತೋಷ್ ಪತ್ನಿ ರೇಣುಕಾ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮರ್ಥನಗರದ ನಿವಾಸಿಯಾಗಿರುವ ಮೃತ ಸಂತೋಷ ಪತ್ನಿ ರೇಣುಕಾ ಪಾಟೀಲ್ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ತನಿಖೆಯ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಪ್ರಕರಣದ ಪ್ರತಿ ಹಂತದ ತನಿಖೆಯನ್ನೂ ಸೋರಿಕೆ ಮಾಡಿ ಈಶ್ವರಪ್ಪನವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ. ಈಶ್ವರಪ್ಪರ ಮಾತುಗಳನ್ನು ಗಮನಿಸಿದರೆ ಅವರ ನಿರ್ದೇಶನದಂತೆಯೇ ತನಿಖೆ ನಡೆಯುತ್ತಿದೆ ಎಂದೆನಿಸುತ್ತಿದೆ. ಹೀಗಾಗಿ ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಕಾಧಿರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ದೂರು ದಾಖಲಿಸಿದ ಆರ್‍ಡಿಪಿಆರ್ ಇಲಾಖೆ ಪ್ರಕರಣ ಹಿನ್ನೆಲೆ: ಬೆಳಗಾವಿ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ 4 ಕೋಟಿ ರೂ. ವೆಚ್ಚದ 108 ಕಾಮಗಾರಿಗಳನ್ನು ಮಾಡಿಸಿದ್ದರು.

ಬಿಲ್ ಮಂಜೂರಾತಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ಸೇರಿ ಗೃಹ ಸಚಿವರಿಗೆ ಸಂತೋಷ್ ಪತ್ರ ಬರೆದಿದ್ದರು. ಇದಾದ ಬಳಿಕ ಈಶ್ವರಪ್ಪನವರು ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಬಳಿಕ ಸಂತೋಷ್ ಉಡುಪಿಯ ಖಾಸಗಿ ಲಾಡ್ಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಕೊನೆಗೆ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಯಿತು.

Articles You Might Like

Share This Article