ತುಮಕೂರು,ಜು.22- ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಿ ಈಶ್ವರಪ್ಪ ಅವರನ್ನು ರಕ್ಷಿಲು ಸರ್ಕಾರ ಯತ್ನಿಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್, ಈಶ್ವರಪ್ಪ ಕೆಲಸ ಮಾಡಿಸಿ ಹಣ ಕೊಡುತ್ತಿಲ್ಲ, ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿರುವ ಡೆತ್ ನೋಟ್ ಮೊಬೈಲ್ನಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ನಾವು ಆಗಲೇ ಒತ್ತಾಯಿಸಿದ್ದೆವು. ಆದರೂ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಲಿಲ್ಲ. ಡೆತ್ ನೋಟ್ನಲ್ಲಿ ಹೆಸರಿರುವರಿಗೆ ಬಿ ರಿಪೋರ್ಟ್ ಹಾಕುವ ಮೂಲಕ ಈಗ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರದ ಕಮೀಷನ್ ದಂಧೆಯಿಂದಾಗಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದರೆ ಈಶ್ವರಪ್ಪ ಪಾತ್ರ ಬಯಲಿಗೆ ಬರುತ್ತದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರ್ಗಗಳ ಮೀಸಲಾತಿ ಸಂಬಂಧ ಭಕ್ತ ವತ್ಸಲಂ ಸಮಿತಿ ನಿನ್ನೆ ವರದಿ ಕೊಟ್ಟಿದೆ. ವರದಿಯನ್ನು ನಾನು ಇನ್ನೂ ನೋಡಿಲ್ಲ, ಹಿಂದುಳಿದ ವರ್ಗಗಳಲಿಗೆ ಶೇ.33ರಷ್ಟು ಮೀಸಲತಿ ನೀಡಬೇಕೆಂದು ಶಿಫಾರಸು ಮಾಡಿರುವುದಾಗಿ ತಿಳಿದು ಬಂದಿದೆ. ಹಿಂದುಳಿದ ಜಾತಿಯವರಿಗೆ ಮೀಸಲಾತಿ ಇರಬೇಕು ಎಂದು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ವರದಿಯನ್ನು ಅಧ್ಯಯನ ಮಾಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ಇರಬೇಕು ಎಂದು ಸಂವಿಧಾನ ನೀಡಿರುವ ಹಕ್ಕನ್ನು ಪಾಲಿಸಬೇಕಿರುವುದು ಎಲ್ಲ ಸರ್ಕಾರಗಳ ಜವಾಬ್ದಾರಿ, ಈ ನಿಟ್ಟಿನಲ್ಲಿ ಸಮಿತಿ ವರದಿ ನೀಡಿದೆ ಎಂದು ಹೇಳಿದರು.
ನಾನು ಇವತ್ತಿನವರೆಗೂ ಹುಟ್ಟುಹಬ್ಬ ಮಾಡಿಕೊಂಡಿಲ್ಲ. ಈ ವರ್ಷ 75ನೇ ವರ್ಷ ತುಂಬುತ್ತಿದೆ. ಅಭಿಮಾನಿಗಳು ಸ್ನೇಹಿತರು ಸೇರಿಕೊಂಡು, ಇದೊಂದು ಮೈಲಿಗಲ್ಲು ಎಂದು ತೀರ್ಮಾನ ಮಾಡಿ ಮಾಡ್ತಿದ್ದಾರೆ. ಅಧಿಕಾರಕ್ಕಾಗಿ ಅಮೃತ ಮಹೋತ್ಸವ ಮಾಡುತ್ತಿಲ್ಲ. ಬಿಜೆಪಿಯವರು ಏನೇನೊ ವ್ಯಾಖ್ಯಾನ ಮಾಡುತ್ತಿದ್ದಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಸಾಧಿಸಲು ಸತೀಶ್ಗೆ ಟಿಕೆಟ್ ನೀಡುವ ಬಗ್ಗೆ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಸಿದ ಅವರು, ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಬೇಕೆಂದು ನಿರ್ಧರಿಸುತ್ತದೆ. ನಮ್ಮಷ್ಟಕ್ಕೆ ನಾವೇ ಅಭ್ಯರ್ಥಿಗಳಾದರೆ ನಡೆಯುವುದಿಲ್ಲ. ಎಲ್ಲವನ್ನೂ ಪರಿಶೀಲಿಸಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಜಮೀರ್ ಅಹಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.