ಸ್ಯಾಂಟ್ರೊ ರವಿ ಬಂಧನದಿಂದ ಸಚಿವರು ಸೇರಿ ಅನೇಕ ಗಣ್ಯರಿಗೆ ಶುರುವಾಯ್ತು ನಡುಕ

Social Share

ಬೆಂಗಳೂರು,ಜ.15- ಸ್ಯಾಂಟ್ರೊ ರವಿ ಬಂಧನದ ಬಳಿಕ ಸಚಿವ ಸಂಪುಟದ ಬಹಳಷ್ಟು ಸಚಿವರು ಸೇರಿದಂತೆ ರಾಜ್ಯದ ಅನೇಕ ಗಣ್ಯರಿಗೆ ನಡುಕ ಉಂಟಾಗಿದೆ. ಚುನಾವಣಾ ವರ್ಷದಲ್ಲಿ ಆತನಿಂದ ಹೊರ ಬರುವ ಸತ್ಯಗಳು ಜ್ವಾಲಾಮುಖಿಯಾಗಿ ಯಾರೆಲ್ಲಾ ಭವಿಷ್ಯವನ್ನು ಅಪೋಶನ ತೆಗೆದುಕೊಳ್ಳುವುದು ಎಂಬ ಚರ್ಚೆಗಳು ಶಾಸಕಾಂಗ ಮತ್ತು ಕಾರ್ಯಾಂಗದ ಒಳವಲಯದಲ್ಲಿ ಕಾವೇರಿಸಿವೆ.

1995ರಿಂದಲೂ ಹಲವು ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಇತ್ತೀಚೆಗೆ ಹೈಪ್ರೊಫೈಲ್ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದ. ಆತನ ವಾಟ್ಸ್‍ಅಪ್ ಸ್ಟೇಟಸ್‍ಗಳ ಪ್ರಕಾರವೇ ಅಧಿಕಾರದಲ್ಲಿರುವ ಗಣ್ಯಾತೀಗಣ್ಯರ ಸಂಪರ್ಕದಲ್ಲಿದ್ದ. ಶಾಸಕರು, ಸಚಿವರು, ಅಕಾರಿಗಳು ಸೇವೆ ಒದಗಿಸುವುದು, ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವುದು ಆತನ ದಂಧೆಯಾಗಿತ್ತು.

11 ತಿಂಗಳು ಜೈಲಿನಲ್ಲಿದ್ದು ಹೊರ ಬಂದ ಬಳಿಕ ತನ್ನ ಚಟುವಟಿಕೆಯ ಸ್ವರೂಪವನ್ನು ಬದಲಾಯಿಸಿಕೊಂಡಿದ್ದ. ಪ್ರಭಾವಿಗಳ ಆಪ್ತವಲಯದಲ್ಲಿ ಗುರುತಿಸಿಕೊಳ್ಳಲಾರಂಭಿಸಿದೆ. ಮೇಲ್ನೋಟಕ್ಕೆ ತನ್ನನ್ನು ತಾನು ಸಮಾಜ ಸೇವಕ ಎಂದು ಹೇಳಿಕೊಂಡು, ಅಕಾರಿಗಳ ವರ್ಗಾವಣೆ ಸೇರಿದಂತೆ ಅನೇಕ ವ್ಯವಹಾರಗಳನ್ನು ಕುದುರಿಸುತ್ತಿದ್ದ.

ಇದರ ಜೊತೆ ಆತ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಕುರಿತು ಇತ್ತೀಚೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡಿದ್ದ ಆತ ತಾನೇ ಸೂಚನೆ ನೀಡಿ ಎರಡನೇ ಪತ್ನಿಯ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವಷ್ಟು ವಿವಿಐಪಿಯಾಗಿದ್ದ.

ಡಿವೈಎಸ್‍ಪಿ ಹಂತದ ಅಕಾರಿಯನ್ನೇ ಗದರಿಸುವಷ್ಟು ಧಾಷ್ಟ್ಯ ಬೆಳೆಸಿಕೊಂಡಿದ್ದ. ಅಂತಹವನ ವಿರುದ್ಧ ಪ್ರಕರಣ ದಾಖಲಿಸುವುದು ಸುಲಭ ಸಾಧ್ಯವಿರಲಿಲ್ಲ.ಡರೋಡೆ ಪ್ರಕರಣದಲ್ಲಿ ಬಂಧಿತಳಾಗಿದ್ದ ಎರಡನೇ ಪತ್ನಿ ಜಾಮೀನಿನ ಮೇಲೆ ಹೊರ ಬಂದ ಬಳಿಕ ಜನವರಿ 2ರಂದು ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಅಟ್ರಾಸಿಟಿ ಕೇಸು ದಾಖಲಿಸಿದ್ದಾರೆ.

75ನೇ ಸೇನಾ ದಿನ : ಬೆಂಗಳೂರಲ್ಲಿ ಮೈನವಿರೇಳಿಸಿದ ಸೈನಿಕರ ಶಕ್ತಿ ಪ್ರದರ್ಶನ

ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಸ್ಯಾಂಟ್ರೋ ರವಿ ಕಾರಣ ಎಂದು ಆರೋಪಿಸಿದರು. ಅನಂತರ ಪ್ರಕರಣ ಗಂಭೀರತೆ ಪಡೆಯುತ್ತಾ ಹೋಗಿದೆ. ಸಂಪುಟದ ಕೆಲ ಸಚಿವರು ತಮ್ಮ ವಿರುದ್ಧ ಮಾನಹಾನಿಯಾದ ವರದಿ, ವಿಡಿಯೋ, ಫೋಟೋಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆಪರೇಷನ್ ಕಮಲದಿಂದಾಗಿ ಬಾಂಬೆ ಸೇರಿದ್ದ ಕೆಲವರಿಗೆ ಸ್ಯಾಂಟ್ರೋ ರವಿ ಕೆಲ ಸೇವೆಗಳನ್ನು ಒದಗಿಸಿದ್ದಾನೆ. ಆ ವಿಡಿಯೋಗಳು ಬಿಡುಗಡೆಗೊಳ್ಳುವ ಅಪಾಯ ಇದೆ ಎಂಬ ವದ್ಧಂತಿಗಳು ಹರಡಿದ್ದವು.

ರಾಜಕೀಯ ಕೃಪಾಕಟಾಕ್ಷದಿಂದ ಈವರೆಗೂ ರಾಜೋರೋಷವಾಗಿ ಮೆರೆಯುತ್ತಿದ್ದ ಸ್ಯಾಂಟ್ರೋನನ್ನು 11 ಪೊಲೀಸ್ ತಂಡಗಳು 12 ದಿನಗಳ ಸತತ ಕಾರ್ಯಾಚರಣೆ ಮೂಲಕ ಗುಜರಾತ್‍ನಲ್ಲಿ ಬಂಸಿ ಕರೆ ತಂದಿವೆ.
ಸಂಕಷ್ಟ ಸಮಯದಲ್ಲಿ ತಮ್ಮ ನೆರವಿಗೆ ಧಾವಿಸದೆ ಪ್ರಭಾವಿಗಳ ವಿರುದ್ಧ ಸ್ಯಾಂಟ್ರೋ ಸಿಟ್ಟಿಗೆದ್ದಿದ್ದಾನೆ ಎನ್ನಲಾಗಿದೆ.

ಆತ ಬಾಯಿ ಬಿಟ್ಟರೆ ಬಹಳಷ್ಟು ಮಂದಿ ಇಕ್ಕಟ್ಟಿಗೆ ಸಿಲುಕುವ ಆತಂಕ ಇದೆ. ಅದಕ್ಕಿಂತಲೂ ಪ್ರಮುಖವಾಗಿ ಚುನಾವಣಾ ಕಾಲಘಟ್ಟದಲ್ಲಿ ಆಕ್ಷೇಪಾರ್ಹವಾದ ಆಡಿಯೋ, ವಿಡಿಯೋಗಳು ಬಹಿರಂಗಗೊಂಡರೆ ಮತದಾನದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.

ಸೂಕ್ಷ್ಮ ಸಮಯದಲ್ಲಿ ಏನಾದರೂ ಬಹಿರಂಗಗೊಂಡರೆ ಎಂದು ಬಹಳಷ್ಟು ಮಂದಿ ಒಳಗೊಳಗೆ ದುಗುಡದಿಂದ ಬೇಯುತ್ತಿದ್ದಾರೆ ಎಂದು ಹೇಳಲಾಗಿದೆ. ಸ್ಯಾಂಟ್ರೋ ಪಿಎಸ್‍ಐನಿಂದ ಎಸಿಪಿವರೆಗು ಪೊಲೀಸರನ್ನು ವರ್ಗಾವಣೆ ಮಾಡಿದ್ದಾನೆ. ಇನ್ನೂ ಕೆಲ ಇಲಾಖೆಗಳ ಅಧಿಕಾರಿಗಳ ವರ್ಗಾವಣೆಯಲ್ಲೂ ಹಸ್ತಕ್ಷೇಪ ಮಾಡಿದ್ದಾನೆ ಎಂದು ಹೇಳಲಾಗಿದೆ.

ಪ್ರಾಥಮಿಕವಾಗಿ ಎರಡನೇ ಪತ್ನಿ ಎಂದು ಹೇಳಲಾದ ಮಹಿಳೆ ನೀಡಿದ ದೂರು ಆಧರಿಸಿ ಪೊಲೀಸರು ಸ್ಯಾಂಟ್ರೋನನ್ನು ಬಂಧಿಸಿದ್ದಾರೆ. ಆದರೆ ಪ್ರಸ್ತುತ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಲವು ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಆತನ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಯಾರೊಂದಿಗೆಲ್ಲಾ ಆತ ಸಂಪರ್ಕದಲ್ಲಿದ್ದ, ಏನೇಲ್ಲಾ ಸೇವೆ ಒದಗಿಸಿದ್ದ, ಏನೆಲ್ಲಾ ಪ್ರಯೋಜನ ಪಡೆದಿದ್ದ ಎಂಬ ವಿವರಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ಸ್ಯಾಂಟ್ರೋ ರವಿ ಹೇಳಿಕೆಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸುವ ಸಾಧ್ಯತೆ ಇದೆ. ಒಂದು ವೇಳೆ ಆತನಿಂದ ನ್ಯಾಯಾಧೀಶರ ಮುಂದೆ ಸಿಆರ್‍ಪಿಸಿ 164 ಅಡಿ ಹೇಳಿಕೆ ಕೊಡಿಸಿದರೆ ಪಕ್ಷಾತೀತವಾಗಿ ಬಹಳಷ್ಟು ಮಂದಿಗೆ ಕಾನೂನಿನ ಕುಣಿಕೆ ತಗಲಿಕೊಳ್ಳುವ ಅಪಾಯವೂ ಇದೆ ಎಂದು ಹೇಳಲಾಗುತ್ತಿದೆ.

Articles You Might Like

Share This Article