ಬೆಂಗಳೂರು,ಜ.12- ಸ್ಯಾಂಟ್ರೋ ರವಿ ಪ್ರಕರಣ ಈಗ ರಾಜಭವನದ ಮೆಟ್ಟಿಲೇರಿದೆ. ಪ್ರಕರಣ ದಾಖಲಾದ ಬಳಿಕವೂ ಆರೋಪಿಯನ್ನು ಬಂಧಿಸಲು ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಅಥವಾ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದು, ಭ್ರಷ್ಟಚಾರ, ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಅಕ್ರಮ ಹಣ ವಹಿವಾಟು, ಅನೈತಿಕ ಚಟುವಟಿಕೆ, ಅತ್ಯಾಚಾರ, ಅತಿಥಿ ಗೃಹವನ್ನು ದುರ್ಬಳಕೆ ಮಾಡಿಕೊಂಡ ಮಂಜುನಾಥ್ ಕೆ.ಎಸ್. ಅಲಿಯಾಸ್ ರವಿ ಅಲಿಯಾಸ್ ಸ್ಯಾಂಟ್ರೋ ರವಿ ಎಂಬ ಆರೋಪಿಯನ್ನು ಬಂಧಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಆತನಿಗೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಲಾಗಿದೆ.
ಆರೋಪಿ ಸ್ಯಾಂಟ್ರೋ ರವಿಗೆ ಮುಖ್ಯಮಂತ್ರಿ, ಗೃಹ ಸಚಿವರು ಸೇರಿ ಅನೇಕ ಸಚಿವರೊಂದಿಗೆ ಸಂಪರ್ಕ ಇದೆ. ಈತನಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈವರೆಗೆ ಆಕೆಗೆ ನ್ಯಾಯ ಸಿಕ್ಕಿಲ್ಲ. ಅಂತಿಮವಾಗಿ ಆಕೆ ತನಗಾದ ನೋವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ ಎಂದು ವಿವರಿಸಲಾಗಿದೆ.
ಪೊಲೀಸ್ ಅಧಿಕಾರಿಯೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಸ್ಯಾಂಟ್ರೋ ರವಿ, ತನಗೆ ಉನ್ನತ ಮಟ್ಟದಲ್ಲಿ ಸಂಪರ್ಕವಿದೆ. ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದಾನೆ. ಮುಖ್ಯಮಂತ್ರಿ ಗೃಹ ಕಚೇರಿಯ ಅಧಿಕಾರಿಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿಕೊಂಡು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾನೆ.
ಈತನ ವಿರುದ್ಧ 2022ರ ಜನವರಿ 21ರಂದು ಕೆಂಗೇರಿ ಗೇಟ್ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಆ ವೇಳೆ ಆತ ಹೇಳಿಕೆ ನೀಡಿದ್ದು, ಮೂರ್ನಾಲ್ಕು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರನ್ನಾಗಿ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟ ಪಡಿದ್ದಾನೆ ಎಂದಿದ್ದಾರೆ.
ಅಂಬ್ರೋನಾಲ್, ಡಾಕ್-1 ಕಾಫ್ ಸಿರಫ್ ಬಳಕೆ ನಿಷೇಧ
ಸ್ಯಾಂಟ್ರೋ ರವಿಯ ಪ್ರಭಾವದಿಂದ ಮಹಿಳೆ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿ ಅಕ್ರಮ ಚಟುವಟಿಕೆಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದು, ಅದನ್ನು ಸಂಬಂಧ ಪಟ್ಟವರಿಗೆ ನೀಡಿರುವ ಬಗ್ಗೆ ವಿಚಾರಣೆ ನಡೆಸಲು ಆರೋಪಿಯ ಬಂಧನ ಬಹಳ ಮುಖ್ಯವಾಗಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
santro ravi, case, governor, Congress,