ಸತೀಶ್ ಜಾರಕಿಹೊಳಿ ಹೇಳಿಕೆಗೆ ಕೈನಲ್ಲಿ ಆಕ್ರೋಶ

Social Share

ಬೆಂಗಳೂರು,ನ.8- ಚುನಾವಣೆ ಹೊಸ್ತಿಲಿನಲ್ಲಿ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಿದ್ದು, ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸತೀಶ್ ಜಾರಕಿಹೊಳಿಯವರು ಪ್ರಗತಿಪರ ಚಿಂತನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಆದರೆ ಪ್ರತಿ ಹೇಳಿಕೆ ಮತ್ತು ನಡೆವಳಿಕೆಗಳಲ್ಲೂ ಜಾಗೃತಿ ವಹಿಸಬೇಕಾದ ಕಡೆ ನಿರ್ಲಕ್ಷ್ಯವಹಿಸಿ ಪಕ್ಷಕ್ಕೆ ಹಾನಿ ಮಾಡಿದ್ದಾರೆ ಎಂಬ ಆಕ್ಷೇಪಗಳು ಕೇಳಿಬಂದಿವೆ.

ಕಾಂಗ್ರೆಸ್ ಒಟ್ಟಾರೆಯಾಗಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಕ್ಷಕ್ಕೆ ಚೈತನ್ಯ ನೀಡುವ ಹೊತ್ತಿನಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ ಮುಜುಗರ ತಂದಿದೆ. ಸಣ್ಣಪುಟ್ಟ ವಿಷಯಗಳಲ್ಲಿ ಭಾವನಾತ್ಮಕ ವಿಷಯಗಳನ್ನು ಕೆಣಕಿ ರಾಜಕಾರಣ ಮಾಡುವ ಬಿಜೆಪಿಗೆ ಸತೀಶ್ ಜಾರಕಿಹೊಳಿ ಬ್ರಹ್ಮಾಸ್ತ್ರವನ್ನೇ ನೀಡಿದ್ದಾರೆ ಎಂಬ ಅಸಮಾಧಾನಗಳು ಕಾಂಗ್ರೆಸ್‍ನಲ್ಲಿ ವ್ಯಕ್ತವಾಗಿದೆ.

ನ.6ರಂದು ಬೆಳಗಾವಿ ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ತಡವಾಗಿ ನಿನ್ನೆ ವೈರಲ್ ಆಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ತಕ್ಷಣ ಪ್ರತಿಕ್ರಿಯೆ ನೀಡಿ ಅಸಮಾಧಾನ ಹೊರಹಾಕಿದ್ದು, ಸತೀಶ್ ಜಾರಕಿಹೊಳಿ ಹೇಳಿಕೆಗೂ ಕಾಂಗ್ರೆಸ್‍ಗೂ ಸಂಬಂಧವಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

ಇಂದು ಬೆಳಗ್ಗೆ ಸತೀಶ್ ಜಾರಕಿಹೊಳಿಯವರು ಖುದ್ದು ಸ್ಪಷ್ಟನೆ ನೀಡಿ, ತಾವು ಯಾರ ಭಾವನೆಗೂ ಧಕ್ಕೆ ಮಾಡುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ಈ ಹಿಂದೆ ಹಲವಾರು ಲೇಖಕರು, ಬುದ್ದಿಜೀವಿಗಳು ಬರೆದಿರುವುದನ್ನೇ ಪುನರುಚ್ಚಿರಿಸಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.

ಇದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕರಿಂದ ರಾಜ್ಯ ನಾಯಕರವರೆಗೂ ಎಲ್ಲರೂ ಸತೀಶ್ ಜಾರಕಿಹೊಳಿ ಹೇಳಿಕೆಗೆ ಟಾಂಗ್ ನೀಡುವ ಮೂಲಕ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಭಾರತದ 6 ನಗರಗಳಲ್ಲಿ ವಿಧ್ವಂಸಕ ಕೃತ್ಯ ದಾವೋದ್ ಸಂಚು

ಕಾಂಗ್ರೆಸ್‍ನ ಪ್ರಮುಖ ನಾಯಕರ ಮೌನವನ್ನು ಈ ವಿಷಯದಲ್ಲಿ ಪ್ರಶ್ನಿಸಲಾಗುತ್ತಿದೆ. ಹಲವಾರು ಅಭಿವೃದ್ಧಿ ಹಾಗೂ ಹಗರಣಗಳ ವಿಷಯಗಳ ಚರ್ಚೆ ನಗಣ್ಯವಾಗಿ ಹೋಗಿದೆ. ಹಿಂದೂ ಎಂಬ ಪದ ಬಳಕೆಯ ಕುರಿತು ಸತೀಶ್ ಜಾರಕಿಹೊಳಿ ಅವರ ಹೇಳಿಕೆ ವಿವಾದವನ್ನು ಭುಗಿಲೇಳಿಸಿದೆ.

ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ, ತುಷ್ಠಿಕರಣದ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಪಕ್ಷ ಎಂದು ಬ್ರಾಂಡ್ ಮಾಡುವ ಬಿಜೆಪಿಗರಿಗೆ ಇದು ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ರಾಜ್ಯದ ಪ್ರಭಾವಿ ನಾಯಕರಲ್ಲಿ ಕೆಲವರು ಸಂಘ ಪರಿವಾರದ ವಿರುದ್ದ ಟೀಕೆ ಮಾಡುವ ಭರದಲ್ಲಿ ಧರ್ಮಾಧಾರಿತ ಹೇಳಿಕೆಗಳನ್ನು ಆಕ್ಷೇಪಕ್ಕೆ ಗುರಿಯಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿತು. ಆದರೆ ಅದು ಅಷ್ಟು ಪರಿಣಾಮ ಬೀರಲಿಲ್ಲ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಓವೈಸಿ ಮನವಿ

ಸತೀಶ್ ಜಾರಕಿಹೊಳಿ ಅವರ ಹೇಳಿಕೆ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಕಾಂಗ್ರೆಸ್‍ಗೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ. ಸುರ್ಜೆವಾಲ ತಕ್ಷಣವೇ ಪ್ರತಿಕ್ರಿಯಿಸದೆ ಇದ್ದರೆ ಕಾಂಗ್ರೆಸ್‍ನಲ್ಲಿನ ಕೆಲವು ಪ್ರಗತಿಪರ ನಾಯಕರು ಸತೀಶ್ ಜಾರಕಿಹೊಳಿಯವರಿಗೆ ಬೆಂಬಲ ವ್ಯಕ್ತಪಡಿಸಿ ವಿವಾದವನ್ನು ಮತ್ತಷ್ಟು ಕೆಣಕುವ ಸಾಧ್ಯತೆ ಇತ್ತು.

ಸುರ್ಜೆವಾಲ ಸ್ಪಷ್ಟನೆ ಸತೀಶ್ ಜಾರಕಿಹೊಳಿ ಅವರನ್ನು ಒಬ್ಬಂಟಿ ಮಾಡಿರುವ ಜೊತೆಗೆ ಬಿಜೆಪಿಯ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದಂತಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಹೋದ ಬಂದ ಕಡೆಯಲೆಲ್ಲ ಈ ಹೇಳಿಕೆ ಇರಿಸುಮುರಿಸು ಉಂಟು ಮಾಡುತ್ತಿದೆ.

Articles You Might Like

Share This Article