ಸಾರ್ವಕರ್ ಬ್ಯಾನರ್ ಪರ-ವಿರೋಧ ಗುಂಪುಗಳ ನಡುವೆ ಗಲಾಟೆ, ಶಿವಮೊಗ್ಗದಲ್ಲಿ ಲಾಠಿ ಚಾರ್ಜ್

Social Share

ಶಿವಮೊಗ್ಗ,ಆ.15- ನಗರದ ಹೃದಯಭಾಗದ ಅಮಿರ್ ಅಹಮ್ಮದ್ ನಗರದಲ್ಲಿ ಅಳವಡಿಸಿದ್ದ ವಿ.ಡಿ. ಸಾರ್ವಕರ್ ಬ್ಯಾನರ್ ಪರ-ವಿರೋಧ ಗುಂಪುಗಳ ನಡುವೆ ವಾಗ್ವಾದ ನಡೆದ ಸಂದರ್ಭದಲ್ಲಿ ಪೊಲೀಸರು ಲಘು ಲಾಠೀ ಪ್ರಹಾರ ನಡೆಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಜಿಲ್ಲೆಯಲ್ಲಿ ಸ್ವಾತಂತ್ರ್ಯೊತ್ಸವದ ಸಂಭ್ರಮದ ನಡುವೆಯೇ ಇಂದು ಮಧ್ಯಾಹ್ನ ಒಂದು ಸಮುದಾಯದ ಗುಂಪು ಸಾರ್ವಕರ್ ಅವರ ಭಾವಚಿತ್ರದ ಫ್ಲೆಕ್ಸ್‍ನ್ನು ತೆರವುಗೊಳಿಸಲು ಮುಂದಾದರು. ಈ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಮತ್ತೊಂದು ಗುಂಪು ಪ್ರತಿಭಟನೆಗೆ ಮುಂದಾಯಿತು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಲಾಠಿ ಬೀಸಿ ಗುಂಪುನ್ನು ಚದುರಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನದ ವೇಳೆ ಎಸ್‍ಡಿಪಿಐನ ಕೆಲವರು ನಿನ್ನೆ ಗಲಾಟೆ ಮಾಡಿ ಸಾರ್ವಕರ್ ಭಾವಚಿತ್ರವನ್ನು ತೆಗೆಸಿದ್ದರು.

Articles You Might Like

Share This Article