ಸಹಜ ಸ್ಥಿತಿಯತ್ತ ಮರಳಿದೆ ಶಿವಮೊಗ್ಗ, ಶಾಲಾ-ಕಾಲೇಜುಗಳು ಆರಂಭ

Social Share

ಶಿವಮೊಗ್ಗ,ಆ.17- ಎರಡು ದಿನಗಳಲ್ಲಿ ನಗರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ತಿಳಿಸಿದರು. ಕಳೆದ ಎರಡು ದಿನಗಳ ಹಿಂದೆ ಬ್ಯಾನರ್ ತೆರವುಗೊಳಿಸಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಸಂಬಂಧ ಅಲೋಕ್‍ಕುಮಾರ್ ಅವರು ಸ್ಥಳದಲ್ಲೇ ಬೀಡು ಬಿಟ್ಟು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಇಂದು ಬೆಳಗ್ಗೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿವಮೊಗ್ಗ ನಗರ ಎರಡು ದಿನದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.

ಇಂದು ಶಾಲಾ -ಕಾಲೇಜುಗಳು ಆರಂಭವಾಗಿವೆ. ಯಾರೂ ಗಾಬರಿ ಪಡಬೇಡಿ ಎಂದು ಅವರು ಅಭಯ ನೀಡಿದರು.
ದ್ವಿಚಕ್ರ ವಾಹನಗಳಲ್ಲಿ 40 ವರ್ಷದ ಒಳಗಿನವರು ಹಿಂಬದಿ ಕುಳಿತು ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ. ಯಾರೂ ಸಹ ಶಾಂತಿ ಕದಡಲು ಯತ್ನಿಸಬಾರದು, ನಿಷೇಧಾಜ್ಞೆ ನಾಳೆಯವರೆಗೂ ಮುಂದುವರೆಯಲಿದೆ ಎಂದರು.

ಇದಕ್ಕೂ ಮುನ್ನ ಅಲೋಕ್‍ಕುಮಾರ್ ಅವರು ಅಧಿಕಾರಿಗಳೊಂದಿಗೆ ನಗರದ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಚಾಕು ಇರಿತ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳ ಬಂಧನವಾಗಿದೆ. ಅವರುಗಳ ವಿಚಾರಣೆ ನಡೆಯುತ್ತಿದೆ ಎಂದರು.

ಕಳೆದ ಎರಡು ದಿನಗಳಿಂದ ಗಾಂಧಿ ಬಜಾರ್ ಬಂದ್ ಆಗಿರುವುದರಿಂದ ಲಕ್ಷಾಂತರ ರೂ.ನಷ್ಟ ಆಗಿರುವುದರಿಂದ ಇಂದು ಈ ಪ್ರದೇಶದಲ್ಲಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಿಷೇಧಾಜ್ಞೆ ಮುಂದುವರಿಕೆಯಾಗಿದ್ದು, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದರು.

ಎಫ್‍ಐಆರ್ ದಾಖಲು:
ವೀರ ಸಾವರ್ಕರ್ ಪ್ಲೆಕ್ಸ್ ತೆರವು ವಿಚಾರವಾಗಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ. ಗಲಾಟೆ ಸಂಬಂಧ ಈವರೆಗೂ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಎಫ್‍ಐಆರ್ ದಾಖಲಾಗಿವೆ. ಸಾವಕರ್ರರ್ ಪ್ಲೆಕ್ಸ್‍ನ್ನು ತೆರವುಗೊಳಿಸುವ ವೇಳೆ ಕಿಡಿಗೇಡಿಗಳು ಘೋಷಣೆ ಕೂಗಿ ಪ್ಲೆಕ್ಸ್ ಹರಿದು ಹಾಕಿದ್ದರು. ಈ ಸಂಬಂಧ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ ಕೂಗಿದ್ದಾರೆ ಎಮದು ಅನ್ಯಕೋಮಿನ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ದೊಡ್ಡಪೇಟೆ ಪೊಲೀಸರು ಎರಡು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಮೂರರಿಂದ ನಾಲ್ಕು ಮಂದಿ ಕಾರಣಕರ್ತರೆಂದು ಎಫ್‍ಐಆರ್‍ನಲ್ಲಿ ದಾಖಲಾಗಿದ್ದು, ಆ ನಾಲ್ಕು ಮಂದಿಗಾಗಿ ದೊಡ್ಡಪೇಟೆ ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ.

Articles You Might Like

Share This Article