ಮಲೆನಾಡಿಗರ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಪ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ

Social Share

ಬೆಂಗಳೂರು, ಸೆ.20- ಪಶ್ಚಿಮಘಟ್ಟ ತಪ್ಪಲಿನ ಮಲೆನಾಡು ಪ್ರದೇಶವನ್ನು ವಿಶೇಷ ಕೃಷಿ ವಲಯವಾಗಿ ಘೋಷಿಸಬೇಕು. ಮಲೆನಾಡಿನ ಕೃಷಿ ಉತ್ಪನ್ನಗಳಿಗೆ ಜಾಗತಿಕ ಬ್ರ್ಯಾಂಡ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಕೃಷಿ ಪೂರಕ ಉದ್ಯಮಗಳಿಗಾಗಿ ವಿಶೇಷ ಕಾರಿಡಾರ್ ನಿರ್ಮಾಣಕ್ಕೆ ಒತ್ತುಕೊಡುವುದು ಸೇರಿದಂತೆ ಹಲವು ಮಹತ್ವದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಲೆನಾಡು ಜನಪರ ಒಕ್ಕೂಟದಿಂದ ಪ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಲೆನಾಡಿಗರನ್ನು ಉಳಿಸಿ ಎಂಬ ಘೋಷವಾಕ್ಯ ದಡಿ ಇಂದು ನಡೆದ ಒಂದು ದಿನದ ಧರಣಿ ಸತ್ಯಾಗ್ರಹದಲ್ಲಿ ಮಲೆನಾಡಿಗರಿಗೆ ಆರೋಗ್ಯ, ಉದ್ಯೋಗ, ವಿದ್ಯೆ, ವಸತಿ, ಅಡಿಕೆ ಬೆಳೆಗಾರರ ರಕ್ಷ ಆಧರಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ ಮಾಡಲಾಯಿತು.

ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ

ಮಲೆನಾಡಿಗೆ ಹಾಲಿನ ಘಟಕ ಸ್ಥಾಪಿಸಿ ಕೆಎಂಎಫ್ ಸಂಪರ್ಕ ಕಲ್ಪಿಸಬೇಕು. ಜನಸಂಖ್ಯೆ ಆಧಾರವಾಗಿ ಪಡೆಯದೇ ಭೂ ಪರಿಮಿತಿಯ ಆಧಾರದಲ್ಲಿ ವಿಧಾನಸಭಾ ಹಾಗೂ ಲೋಕಸಭೆಯ ಕ್ಷೇತ್ರವನ್ನು, ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳನ್ನೂ ಸಹ ಪುನರ್ ವಿಂಗಡಿಸಬೇಕು. ಅಡಿಕೆಗೆ ಬಂದಿರುವ ಎಲೆಚುಕ್ಕಿ ರೋಗಕ್ಕೆ ಲಸಿಕೆ ಕಂಡುಹಿಡಿಯಲು ಸರ್ಕಾರ ಗಮನ ಹರಿಸಿ ತುರ್ತು ಪರಿಹಾರ ನೀಡಬೇಕು.

ಮಲೆನಾಡನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸುವುದಾಗಲೀ, ಇದಕ್ಕೆ ಪೂರಕವಾಗಿ ಕಸ್ತೂರಿರಂಗನ್ ವರದಿ ಯಥಾವತ್ತಾಗಿ ಒಪ್ಪಿಕೊಳ್ಳುವುದಾಗಲೀ ಹಾಗೂ ಹುಲಿ ಯೋಜನೆಯ ವಿಸ್ತರಣೆಯ ಕಾರಣದಿಂದ ಜನರ ಎತ್ತಂಗಡಿಯ ಉದ್ದೇಶವನ್ನಾಗಲೀ ಅಥವಾ ಇಲ್ಲಿಯ ನೆಲವಾಸಿಗಳಿಗೆ ಯಾವುದೇ ತೊಂದರೆಯಾಗುವ ಎಲ್ಲಾ ಪ್ರಸ್ತಾವನೆಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಕೈಬಿಡಲು ಸರ್ಕಾರ ತೀರ್ಮಾನ ಮಾಡಬೇಕು ಎಂಬಂತಹ ಮಹತ್ವದ ಬೇಡಿಕೆಗಳನ್ನು ಈಡೇರಿಸುಂತೆ ಆಗ್ರಹಿಸಲಾಯಿತು.

ರೈತರು, ನೆಲವಾಸಿಗಳು ಸರ್ಕಾರಿ ಭೂಮಿಯಲ್ಲಿ ಮಾಡಿಕೊಂಡ ಸಾಗುವಳಿ ಪ್ರದೇಶದ ಕಾನೂನಿನ ನಿರ್ಬಂಧ ಸಡಿಲೀಕರಿಸಿ ಭೂ ಮಂಜೂರಾತಿಗೆ ಅವಕಾಶ ಮಾಡಿಕೊಡಬೇಕು. ಪ್ರತೀ ವರ್ಷ ಏಪ್ರಿಲ್ 15ನ್ನು ಮಲೆನಾಡು ದಿನವನ್ನಾಗಿ ಆಚರಿಸಿ, ಮಲೆನಾಡಿನ ಜನಜೀವನ, ಕೃಷಿ, ಪರಂಪರೆ, ಜನಪದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಾಗೂ ಅನುದಾನ ಮೀಸಲಿರಿಸುವಂತೆ ಒತ್ತಾಯಿಸಲಾಯಿತು.

ಹಿಂದೆ ಯಾವರೀತಿಯಲ್ಲಿ ರೈತರು, ಬಡವರಿಗೆ ರಿಯಾಯ್ತಿ ಮತ್ತು ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತೋ ಹಾಗೆಯೇ ಪೂರೈಸಬೇಕು ಮತ್ತು ಮೀಟರ್ ಅಳವಡಿಕೆ ವಿಧಾನ ರದ್ದುಪಡಿಸಬೇಕು. ಭೀಕರ ನೆರೆಯಲ್ಲಿ ಆದ ಬೆಳೆ ನಷ್ಟ, ಜೀವ ನಷ್ಟಗಳಿಗೆ ಜಿಲ್ಲಾಡಳಿತದ ಅಂದಾಜು ಮೊತ್ತಕ್ಕೆ ಪೂರಕ ಪರಿಹಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೊಡಿಸಬೇಕು. ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ನೇಮಿಸಿದ್ದ ಗೋರಖ್ ಸಿಂಗ್ ವರದಿಯ ಅನುಷ್ಠಾನ ಆಗಬೇಕು. ಮಲೆನಾಡಿಗೆ ಪೂರಕವಾಗುವ ಮಿನಿ ಬಸ್ ಸಂಪರ್ಕ ಜಾಲ ಕೆಎಸ್‍ಆರ್‍ಟಿಸಿ ವ್ಯವಸ್ಥೆ ವಿಸ್ತರಿಸಬೇಕು ಎಂದು ಮನವಿಮಾಡಲಾಯಿತು.

ಮಲೆನಾಡಿನಲ್ಲಿ ಕಾಡುಪ್ರಾಣಿಗಳಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಮೊತ್ತ ಹೆಚ್ಚಿಸಬೇಕು. ಮಲೆನಾಡಿನಲ್ಲಿ ಭೂ ಕುಸಿತಕ್ಕೆ ಕಾರಣವಾಗುತ್ತಿರುವ ಅರಣ್ಯ ಇಲಾಖೆಯ ಅವೈಜ್ಞಾನಿಕ ಇಂಗು ಗುಂಡಿ ಹಾಗೂ ಗೊತ್ತು ಗುರಿಯಿಲ್ಲದೇ ನೀರಿನ ಅನೈಸರ್ಗಿಕ ಹರಿವಿಗೆ ಕಾರಣವಾಗುತ್ತಿದ್ದು, ಇದಕ್ಕೆ ಭೂ ಕುಸಿತ ಹೆಚ್ಚಾಗುತ್ತಿದೆ ಇದನ್ನು ನಿಲ್ಲಿಸಬೇಕು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ,ಮೋಟಮ್ಮ , ಬಿ.ಬಿ.ನಿಂಗಯ್ಯ, ಸುೀರ್ ಕುಮಾರ್ ಮುರೊಳ್ಳಿ, ಪ್ರಧಾನ ಸಂಚಾಲಕರು ಹಾಗೂ ಮಲೆನಾಡಿನ ನೆಲ ವಾಸಿಗಳಾದ ಅನಿಲ್ ಹೊಸಕೊಪ್ಪ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

Articles You Might Like

Share This Article