ಪ್ರಧಾನಿ ಭದ್ರತಾಲೋಪ : ಮಲ್ಹೋತ್ರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ

Social Share

ನವದೆಹಲಿ, ಜ.12- ಪ್ರಧಾನಿ ಅವರ ಭದ್ರತಾ ಲೋಪದ ಕುರಿತಂತೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಇಂದು ಮಲ್ಹೋತ್ರ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದೆ. ಜನವರಿ 5ರಂದು ಪ್ರಧಾನ ಮಂತ್ರಿಯವರು ಪಂಜಾಬ್‍ನ ಹುಸ್ಸೈನಿವಾಲಾದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ರ್ಯಾಲಿಯಲ್ಲಿ ಭಾಗವಹಿಸಲು ರಸ್ತೆ ಮಾರ್ಗದಲ್ಲಿ ತೆರಳಿದ್ದರು.
ಈ ವೇಳೆ ರೈತರ ಪ್ರತಿಭಟನೆಯಿಂದಾಗಿ ಫಿರೋಝಪುರ್ ಮೇಲುಸೇತುವೆ ಮೇಲೆ 20 ನಿಮಿಷಗಳ ಕಾಲ ಪ್ರಧಾನಿ ಸಿಲುಕಿಕೊಂಡಿದ್ದರು. ಸಂಚಾರ ದಟ್ಟಣೆಯಿಂದ ಮುಂದೆ ಹೋಗಲಾದೆ ಸಿಲುಕಿಕೊಂಡಿದ್ದ ಅವರು ವಾಪಾಸ್ ಬಂದಾಗ ವಿಮಾನ ನಿಲ್ದಾಣದಲ್ಲಿ ನಾನು ಜೀವಂತವಾಗಿ ಬಂದಿದ್ದೇನೆ, ಅದಕ್ಕಾಗಿ ನಿಮ್ಮ ಮುಖ್ಯಮಂತ್ರಿಯವರಿಗೆ ಧನ್ಯವಾದ ತಿಳಿಸಿ ಎಂದು ಅಧಿಕಾರಿಗಳು ಹೇಳಿದ್ದರು.
ಈ ಘಟನೆಯನ್ನು ಪ್ರಧಾನಿ ಅವರ ಭದ್ರತೆಯಲ್ಲಾದ ಭಾರೀ ಲೋಪ ಎಂಬ ಆರೋಪಗಳು ಕೇಳಿ ಬಂದಿದ್ದವು. ಲೋಪದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದವು, ತನಿಖೆಗೆ ತಮ್ಮದೇ ಆದ ವಿಚಾರಣಾ ಸಮಿತಿಗಳನ್ನು ರಚಿಸಿದ್ದವು.
ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ವತಂತ್ರ ತನಿಖಗೆ ಸಮಿತಿ ರಚನೆ ಮಾಡುವುದಾಗಿ ತಿಳಿಸಿತ್ತು.
ಅದರಂತೆ ಇಂದು ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ಇಂದು ಮಲ್ಹೋತ್ರ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಮಹಾನಿರ್ದೇಶಕರು, ಪಂಜಾಬ್‍ನ ಭದ್ರತಾ ವಿಭಾಗದ ಮಹಾನಿರ್ದೇಶಕರು, ಹರ್ಯಾಣ ಮತ್ತು ಪಂಜಾಬ್‍ನ ರಿಜಿಸ್ಟರ್ ಅವರು ತನಿಖಾ ಸಮಿತಿಯ ಸದಸ್ಯರಾಗಿದ್ದಾರೆ.
ಈ ಸಮಿತಿ ಸ್ವತಂತ್ರವಾಗಿ ತನಿಖೆ ನಡೆಸಿ, ಭದ್ರತಾಲೋಪಗಳನ್ನು ಪತ್ತೆ ಹಚ್ಚಲಿದೆ. ಘಟನೆಗೆ ಯಾರು ಹೊಣೆ ಎಂಬುದನ್ನು ಗುರುತಿಸುವುದು ಮತ್ತು ಮುಂದಿನ ದಿನಗಳಲ್ಲಿ ಗಣ್ಯರ ಭದ್ರತೆಯಲ್ಲಿ ಈ ರೀತಿಯ ಲೋಪಗಳಾದಂತೆ ಎಚ್ಚರಿಕೆ ವಹಿಸುವ ಕುರಿತಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ.

Articles You Might Like

Share This Article