ಗೇಟ್ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ

Social Share

ನವದೆಹಲಿ, ಫೆ.3- ದೇಶದಲ್ಲಿನ ಹಲವಾರು ಭಾಗಗಳಲ್ಲಿ ಕೋವಿಡ್ ನಿರ್ಬಂಧಗಳು ಇರುವ ಹಿನ್ನೆಲೆಯಲ್ಲಿ ಫೆ.5ರಂದು ನಡೆಯಲು ನಿಗದಿಯಾಗಿರುವ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (ಗೇಟ್) ಪರೀಕ್ಷೆಯನ್ನು ಮುಂದೂಡಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ನಿಗದಿತ ಅವಗೆ ಕೇವಲ 48 ಗಂಟೆಗೆ ಮುನ್ನ ಪರೀಕ್ಷೆಯನ್ನು ಮುಂದೂಡುವುದು ಗೊಂದಲ ಮತ್ತು ಅನಿಶ್ಚಿತತೆಯನ್ನುಂಟು ಮಾಡುತ್ತದೆ ಮತ್ತು ಈಗಾಗಲೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವಂತಾಗಬಾರದು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಂನಾಥ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಇದು ಒಂದು ಶಿಕ್ಷಣ ನೀತಿಗೆ ಸಂಬಂಧಪಟ್ಟ ವಿಷಯ. ಯಾವಾಗ ಪರೀಕ್ಷೆ ನಡೆಸಬೇಕೆಂಬ ವಿಷಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು. ಈ ಪರೀಕ್ಷೆಗೆ 9 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಮತ್ತು ಸುಮಾರು 20,000 ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಬೇಕೆಂಬ ಆನ್‍ಲೈನ್ ಅರ್ಜಿಗೆ ಸಹಿ ಮಾಡಿದ್ದಾರೆ ಎಂಬ ಅಂಶವನ್ನು ನ್ಯಾಯಪೀಠವು ಗಮನಕ್ಕೆ ತೆಗೆದುಕೊಂಡಿತು. ಬುಧವಾರ ಸರ್ವೋನ್ನತ ನ್ಯಾಯಾಲಯವು ಗೇಟ್ ಪರೀಕ್ಷೆ ಮುಂದೂಡಬೇಕೆಂಬ ಮನವಿಯನ್ನು ವಿಚಾರಣೆಗೆ ಅಂಗೀಕರಿಸಿತ್ತು.

Articles You Might Like

Share This Article