SC/ST ಸಮುದಾಯಕ್ಕೆ ಭರಪೂರ ಕೊಡುಗೆ

Social Share

ಬೆಂಗಳೂರು,ಫೆ.17- ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಖರೀದಿಗೆ 50 ಸಾವಿರ ಸಹಾಯಧನದ ಜತೆಗೆ ಬಾಬು ಜಗಜೀವನ್ರಾಮ್ ಉದ್ಯೋಗ ಯೋಜನೆಯಡಿ ವಿದ್ಯುತ್ ತ್ರಿಚಕ್ರ ಅಥವಾ ನಾಲ್ಕು ಚಕ್ರದ ಸರಕು ವಾಹನಗಳನ್ನು ಖರೀದಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೂರು ಫಲಾನುಭವಿಗಳಂತೆ ಆಯ್ಕೆ ಮಾಡಿ ಶೇ.50ರಷ್ಟು (2 ಲಕ್ಷದವರೆಗೆ) ಸಹಾಯಧನ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಯವ್ಯಯದಲ್ಲಿ ಘೋಷಿಸಿದ್ದಾರೆ.

ಇದಕ್ಕಾಗಿ 400 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಕರ್ನಾಟಕ ಪರಿಶಿಷ್ಟ ಜಾತಿ, ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಗೆ ಇನ್ನಷ್ಟು ಸುಧಾರಣೆ ತರಲು ಸೆಕ್ಷನ್ 7 (ಡಿ) ಪರಿಷ್ಕರಣೆ ಸೇರಿದಂತೆ ಹಲವಾರು ಸಲಹೆಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನನ್ನು ಸಂರಕ್ಷಿಸಲು ಈಗಿರುವ ಕಾನೂನು ತೊಡಕುಗಳನ್ನು ನಿವಾರಿಸಲು ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು. ಅಮರಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯುನಿಟ್ ಉಚಿತ ವಿದ್ಯುತ್ ಕಲ್ಪಿಸಲಾಗುವುದು.
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ 9500 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳ ಮೂಲಕ 17 ಸಾವಿರ ಫಲಾನುಭವಿಗಳಿಗೆ 675 ಕೋಟಿ ಸಹಾಯಧನವನ್ನು ಡಿಬಿಟಿ ಮೂಲಕ ಅನುಷ್ಠಾನ ಗೊಳಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಯೋಜನೆ ವಿಳಂಬವನ್ನು ಬಗೆಹರಿಸುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಇ-ರುಪಿ ಮೂಲಕ ನೇರವಾಗಿ ಹಣ ಪಾವತಿಸಲು ಕ್ರಮ ವಹಿಸಲಾಗುವುದು. ಮೆಟ್ರಿಕ್ ನಂತರ ಶಾಲೆಯಿಂದ ಹೊರಗುಳಿಯುವಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಸಂಖ್ಯೆ ತಗ್ಗಿಸಲು ನೂರು ಕ್ರೈಸ್ ವಸತಿ ಶಾಲೆಗಳನ್ನು ಉನ್ನತೀಕರಿಸಿ ಪದವಿಪೂರ್ವ ಶಿಕ್ಷಣ ಪ್ರಾರಂಭಿಸಲಾಗುವುದು ಮತ್ತು 10 ಕ್ರೈಸ್ ವಸತಿ ಶಾಲೆಗಳಲ್ಲಿ ಒಂದರಂತೆ ಕ್ರೀಡಾ ಸೌಲಭ್ಯ ಒದಗಿಸಲಾಗುವುದು.

ಪ್ರಸ್ತುತ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಸಣ್ಣ ಕಾಮಗಾರಿಗಳಲ್ಲಿ ಶೇ.24ರ ವರೆಗಿನ ಮೀಸಲಾತಿ ಮುಂದುವರೆಸಿ ಪ್ರಸ್ತುತ ಇರುವ 50 ಲಕ್ಷ ರೂ.ಗಳ ಮಿತಿಯನ್ನು 1 ಕೋಟಿಗೆ ಹೆಚ್ಚಿಸಲಾಗಿದೆ.ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್ಸಿ, ಎನ್ಐಟಿ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 2 ಲಕ್ಷವಿದ್ದ ಪೊ್ರೀತ್ಸಾಹಧನವನ್ನು 4 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಐಎಸ್ಇಸಿ ಸಂಸ್ಥೆಯಲ್ಲಿ ಪಿಎಚ್ಡಿ ಮಾಡುವ 5 ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ನೀಡಲು ನಿರ್ಧರಿಸಲಾಗಿದ್ದು, ಇದಕ್ಕೆ 2 ಕೋಟಿ ರೂ.ಗಳ ಕಾರ್ಪಸ್ ಫಂಡ್ ಸ್ಥಾಪಿಸಲಾಗುವುದು.

ಎಸ್ಸಿ-ಎಸ್ಟಿ ನಿರುದ್ಯೋಗಿಗಳಿಗೆ ಆದಾಯ ಬರುವ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ವಾಣಿಜ್ಯ ಬ್ಯಾಂಕ್ಗಳಿಂದ ಗರಿಷ್ಠ 10 ಲಕ್ಷ ರೂ.ಗಳ ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ನೀಡಲು ನಿರ್ಧರಿಸಲಾಗಿದ್ದು, ಇದಕ್ಕೆ ಸಹಾಯಧನವನ್ನು ಕೂಡ ನೀಡಲಾಗುವುದು. ಇದಲ್ಲದೆ, ಸಮುದಾಯದ 10 ಸಾವಿರ ಯುವಜನರು ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ನೇಮಕಾತಿ ಹೊಂದಲು ಉಚಿತ ತರಬೇತಿ ನೀಡಲಾಗುವುದು.

ವಿಶೇಷವಾಗಿ ಸಫಾಯಿ ಕರ್ಮಚಾರಿಗಳಿಗೆ ರಾಜೀವ್ಗಾಂ ವಸತಿ ನಿಗಮದ ವತಿಯಿಂದ ವಸತಿ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಎಸ್ಸಿ-ಎಸ್ಟಿಗೆ ಸೇರಿ ಆರು ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿರುವ ಅನುದಾನವನ್ನು ಈ ಸಾಲಿನಲ್ಲಿ 795 ಕೋಟಿಗೆ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಅನುದಾನ ಮತ್ತು ಈಗಾಗಲೇ ಲಭ್ಯವಿರುವ ಮೊತ್ತವೂ ಸೇರಿದಂತೆ 223-24ರಲ್ಲಿ ಒಟ್ಟು 1842 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.

ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರಸ್ತುತ 2.28 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ದಾಖಲಾತಿ ಪ್ರಮಾಣವನ್ನು ಶೇ.25ರಷ್ಟು ಹೆಚ್ಚಿಸಿ 30 ಸಾವಿರ ವಿದ್ಯಾರ್ಥಿಗಳ ಹೆಚ್ಚುವರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದಲ್ಲದೆ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪರಿಗಣಿಸಿ 20 ಹೊಸ ವಿದ್ಯಾರ್ಥಿನಿಲಯಗಳನ್ನು ಬಿಲ್ಟ್ ಟು ಸೂಟ್ ಮಾದರಿಯಲ್ಲಿ ನಿರ್ಮಿಸಲಾಗುವುದು. ಉನ್ನತ ಶಿಕ್ಷಣ ಇಲಾಖೆಯಲ್ಲಿರುವ 160 ವಿದ್ಯಾರ್ಥಿ ನಿಲಯಗಳನ್ನು ಈ ಇಲಾಖೆಗೆ ಹಸ್ತಾಂತರಿಸುವ ಮೂಲಕ 1 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಲಭ್ಯ ಅಭಿವೃದ್ಧಿ ಹಾಗೂ ದುರಸ್ತಿಗೆ 250 ಕೋಟಿ ರೂ.ಗಳ ಹೆಚ್ಚುವರಿ ಅನುದಾನದ ವಿಶೇಷ ಪ್ಯಾಕೇಜ್ ಒದಗಿಸಲಾಗಿದೆ ಮತ್ತು ಈ ಸಮುದಾಯಕ್ಕೆ ಸೇರಿದ ವಿವಿಧ ಮಠಗಳಿಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗಾಗಿ (1115) ಸಂಸ್ಥೆಗಳಿಗೆ 350 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.

ಶುಲ್ಕ ಪಾವತಿ ಕಾರ್ಯಕ್ರಮದಡಿ 400 ಕೋಟಿ ರೂ. ಒದಗಿಸಲಾಗುತ್ತಿದ್ದು, ಈ ಅನುದಾನವನ್ನು ಡಿವಿಟಿ ಮೂಲಕ 8 ಲಕ್ಷ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ ಪ್ರತಿ ಶಾಲೆಗೆ 18 ಕೋಟಿ ರೂ. ವೆಚ್ಚದಲ್ಲಿ ಶ್ರೀ ನಾರಾಯಣಗುರು ವಸತಿ ಶಾಲೆ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ.

ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೈನಿಕ್ ಸ್ಕೂಲ್ ಸೊಸೈಟಿ ಪ್ರಾರಂಭಿಸಲಾಗಿದೆ. ಇದಕ್ಕಾಗಿ 217 ಕೋಟಿ ರೂ. ಇರಿಸಲಾಗಿದೆ. ಹಿಂದಿನ ಸರ್ಕಾರಗಳು ಕೇವಲ 54.14 ಕೋಟಿ ಬಿಡುಗಡೆ ಮಾಡಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ 261 ಕೋಟಿ ರೂ.ಗಳನ್ನು ಒದಗಿಸಿ ಮಾಸ್ಟರ್ ಪ್ಲಾನ್ನಂತೆ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗುತ್ತಿದೆ ಎಂದು ಹೇಳಿದರು.

50 ಕನಕದಾಸ ವಿದ್ಯಾರ್ಥಿನಿಲಯಗಳ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಈ ಸಂಬಂಧ 5 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಕುರಿತಂತೆ ತಾಲೂಕುವಾರು ಅರ್ಜಿಗಳನ್ನು ಆಹ್ವಾನಿಸಿ ಸಿಇಟಿ ಕೌನ್ಸಿಲಿಂಗ್ ಮಾದರಿಯಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಮತ್ತು ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಮಾಸಿಕ ಭೋಜನ ವೆಚ್ಚ 150ರೂ.ಗಳಿಗೆ ಹೆಚ್ಚಳ, ಗಂಗಾ ಕಲ್ಯಾಣ ಯೋಜನೆಯಡಿ 19,731 ಫಲಾನುಭವಿಗಳನ್ನು ಗುರುತಿಸಿ 490 ಕೋಟಿ ರೂ.ಗಳನ್ನು ಒದಗಿಸುವ ಗುರಿ ಹೊಂದಲಾಗಿದೆ.

ವಿಶೇಷವಾಗಿ 1282 ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿನ 8, 9, ಮತ್ತು 10ನೆ ತರಗತಿಯ 10 ಸಾವಿರ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ವಿಷಯಗಳ ಬಗ್ಗೆ ತರಬೇತಿ ನೀಡಲು 8.50 ಕೋಟಿ ಒದಗಿಸಲಾಗುವುದು.

#SCSTCommunity, #BasavarajBommai #Budget2023, #StateBudget2023, #BommaiBudget, #ಬಜೆಟ್ #ಬಜೆಟ್2023,

Articles You Might Like

Share This Article