SC-ST ಸಮುದಾಯದವರಿಗಾಗಿ ‘ಶುಭಲಗ್ನ’ ಸಾಮೂಹಿಕ ವಿವಾಹ ಕಾರ್ಯಕ್ರಮ

Social Share

ಬೆಂಗಳೂರು, ಜು.27- ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗಿರುವ ಸರ್ಕಾರ ಶುಭಲಗ್ನ ಎಂಬ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆರಂಭಿಸಲು ಮುಂದಾಗಿದೆ.

ಈಗಾಗಲೇ ಸಪ್ತಪದಿ ಎಂಬ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಾರಿಗೆ ತಂದಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಕೋವಿಡ್ ಎರಡು ವರ್ಷಗಳ ಕಾಲ ಸತತವಾಗಿ ಬಾಧಿಸಿದ ಪರಿಣಾಮ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಸಾಧ್ಯವಾಗಿರಲಿಲ್ಲ.

ಕಳೆದ ವರ್ಷದಿಂದ ಅದನ್ನು ಮರು ಜಾರಿಗೊಳಿಸಲಾಗಿದೆ. ಸಪ್ತಪದಿ ಯೋಜನೆಯಡಿ, ವರನಿಗೆ ಶರ್ಟ್, ಧೋತಿ ಹಾಗೂ 5000 ರೂಪಾಯಿ ನಗದು, ವಧುವಿಗೆ ರೇಷ್ಮೆ ಸೀರೆ, 1,000 ರೂಪಾಯಿ ನಗದು ಮಂಗಳ ಸೂತ್ರಕ್ಕಾಗಿ 8 ಗ್ರಾಮ್ ಚಿನ್ನ ನೀಡಲಾಗುತ್ತಿತ್ತು.

ಸಪ್ತಪದಿ ಯೋಜನೆಯನ್ನು ಈ ಹಿಂದಿನ ಮುಜರಾಯಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಆಯೋಜಿಸುತ್ತಿದ್ದರು. ಶುಭ ಲಗ್ನ ಎನ್ನುವುದು ಇದೇ ಮಾದರಿಯ ಸಾಮೂಹಿಕ ವಿವಾಹ ಕಾರ್ಯಕ್ರಮವಾಗಿರಲಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ವಧು-ವರರಿಗೆ ಹೆಚ್ಚಿನ ಪ್ರಯೋಜನಗಳು ಸಿಗಲಿದೆ.

ಶುಭ ಲಗ್ನ ಯೋಜನೆಯಿಂದ ಪರಿಶಿಷ್ಟ ಜಾತಿಗೆ ಸೇರಿದ 28-30 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಈ ವಿಭಾಗದಲ್ಲಿ ಹಲವು ಮಂದಿ ಆರ್ಥಿಕವಾಗಿ ದುರ್ಬಲರಾದವರಿಗೆ ನೆರವು ದೊರೆಯಲಿದೆ. ಸಪ್ತಪದಿ ಯೋಜನೆಯ ಮಾದರಿಯಲ್ಲೇ ಶುಭ ಲಗ್ನ ಯೋಜನೆಯಲ್ಲಿಯೂ ವಧು-ವರರಿಗೆ ವಸ್ತ್ರಗಳು ದೊರೆಯಲಿದೆ. ಜೊತೆಗೆ ದಂಪತಿಗೆ ದೀರ್ಘಾವಯಲ್ಲಿ ಉಪಯೋಗವಾಗುವಂತಹ ಸ್ಥಿರ ಠೇವಣಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ, ಇವೆಲ್ಲಾ ಪ್ರಾರಂಭಿಕ ಯೋಜನೆಗಳು ಎಂದು ಮೂಲಗಳು ತಿಳಿಸಿವೆ.

ಸಪ್ತಪದಿ ಯೋಜನೆ ಹಿಂದೂ ಕಾಯ್ದೆಯಡಿ ಎಲ್ಲಾ ಅರ್ಹ, ವಧು-ವರರಿಗೆ ಅನ್ವಯವಾಗುತ್ತಿತ್ತು. ಶುಭಲಗ್ನ ಯೋಜನೆ ಎಸ್ ಸಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿರಲಿದೆ. ಎಸ್ ಸಿ ಅಡಿಯಲ್ಲಿ ನೂರಾರು ಉಪಜಾತಿಗಳಿದ್ದು ಎಲ್ಲರೂ ಭಿನ್ನವಾದ ಆಚರಣೆಗಳನ್ನು ಹೊಂದಿರುತ್ತಾರೆ. ಅದ್ದರಿಂದ ಪ್ರತ್ಯೇಕವಾದ ವಿವಾಹ ಕಾರ್ಯಕ್ರಮ ಆಯೋಜನೆ ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಸರಳವಾದ ಧಾರ್ಮಿಕ ಆಚರಣೆಗಳಿರಲಿವೆ ಜೊತೆಗೆ ವಿವಾಹ ನೋಂದಣಿಯೂ ಆಗಲಿದ್ದು, ಊಟದ ವ್ಯವಸ್ಥೆಯೂ ಇರಲಿದೆ.

ಪ್ರತಿ ಜಿಲ್ಲೆಯಲ್ಲೂ 100 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ ವರ್ಷ 35 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Articles You Might Like

Share This Article