ಬೆಂಗಳೂರು, ಸೆ.23- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳ ಕುರಿತಂತೆ ಇನ್ನೊಂದು ವಾರದಲ್ಲಿ ಸರ್ವಪಕ್ಷ ಸಭೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಗಿಂದು ತಿಳಿಸಿದರು.
ಜೆಡಿಎಸ್ ಶಾಸಕರ ಧರಣಿ ನಡುವೆ ಸ್ವಯಂ ಹೇಳಿಕೆ ನೀಡಿದ ಮುಖ್ಯಮಂತ್ರಿ, ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಮತ್ತು ನ್ಯಾಯಮೂರ್ತಿ ಸುಭಾಷ್ ಆಡಿ ಅವರ ಸಮಿತಿ ವರದಿಗಳು ಸಲ್ಲಿಕೆಯಾಗಿವೆ. ಸಂವಿಧಾನ ಮತ್ತು ಕಾನೂನಾತ್ಮಕ ವಿಚಾರವಾಗಿದೆ. ಈ ಸಂಬಂಧ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಿ ಮುಂದಿನ ಹೆಜ್ಜೆಗಳನ್ನು ಇಡಬೇಕು ಎಂದರು.
ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡಿ ದಿನಾಂಕ ನಿಗದಿ ಪಡಿಸಲಾಗುವುದು. ಎಸ್ಸಿ,ಎಸ್ಟಿ, ಓಬಿಸಿ ವಿಚಾರದಲ್ಲಿ ಆಯಾ ಜನಾಂಗಕ್ಕೆ ನ್ಯಾಯ ಕೊಡಿಸಲು ಬದ್ಧವಾಗಿದೆ. ಅವರ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಕೊಡಿಸಲು ಸರ್ಕಾರ ಬದ್ಧವಾಗಿದೆ. ಅವರ ಭಾವನೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕಾನೂನಾತ್ಮಕವಾಗಿ ಮುಂದುವರೆಯುವ ಬಗ್ಗೆ ಮುಂದಿನ ಹೆಜ್ಜೆ ಇಡುವ ಬಗ್ಗೆ ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು. ಬಹುದಿನಗಳ ಬೇಡಿಕೆಗೆ ನ್ಯಾಯ ಒದಗಿಸಲು ಸರ್ವ ಪಕ್ಷದ ಸಭೆ ಕರೆಯಲಾಗುತ್ತಿದೆ. ಹೀಗಾಗಿ ಸತ್ಯಾಗ್ರಹ ಮಾಡುತ್ತಿರುವುದನ್ನು ವಾಲ್ಮೀಕಿ ಸಮುದಾಯದ ಸ್ವಾಮೀಜಿ ಕೈ ಬಿಡಬೇಕು ಎಂದು ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಾಗಬೇಕು.ಸ್ವಾಮೀಜಿ ಅವರು ಧರಣಿ ಮಾಡುತ್ತಿದ್ದಾರೆ. ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ಅದರ ಪ್ರಕಾರ ಎಸ್ಸಿ, ಎಸ್ಟಿ ಮೀಸಲಾತಿ ಶೇ.22ರಷ್ಟಾಗಬೇಕು. ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಏರಿಕೆಯಾಗಲಿದೆ. ಹೀಗಾಗಿ ವಿಳಂಬ ಮಾಡದೆ ಸರ್ವಪಕ್ಷ ಸಭೆ ಕರೆದು ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮೀಸಲಾತಿ ಸಂಬಂಧ ಸರ್ವ ಪಕ್ಷಗಳ ಸಭೆ ಕರೆಯಲು ನಮ್ಮ ಪಕ್ಷದ ಸಹಮತವಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿ 230 ದಿನಗಳಿಂದ ಧರಣಿ ಮಾಡುತ್ತಿದ್ದು, ಅವರು ಕೂಡಲೇ ಧರಣಿ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ಮೂರು-ನಾಲ್ಕು ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಆದಷ್ಟು ಬೇಗ ಸವ9ಪಕ್ಷದ ಸಭೆ ಕರೆಯಬೇಕು. ಕಾನೂನಾತ್ಮಕ ತೀರ್ಮಾನ ಕೈಗೊಳ್ಳಬೇಕು ಎಂದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸರ್ಕಾರ ಮತ್ತು ಸರ್ವಪಕ್ಷಗಳ ಮೇಲೆ ವಿಶ್ವಾಸವಿಟ್ಟು ಸ್ವಾಮೀಜಿ ಅವರು ಧರಣಿ ಕೈಬಿಡಬೇಕು ಎಂದು ಮನವಿ ಮಾಡಿದರು.