ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ಉಚಿತ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ

Social Share

ಬೆಂಗಳೂರು,ಸೆ.18-ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸೀಮಿತ ಸಂಖ್ಯೆ ವಿದ್ಯಾರ್ಥಿಗಳಿಗೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಕರ್ನಾಟಕ ದರ್ಶನ ಎಂಬ ಉಚಿತ ಶೈಕ್ಷಣಿಕ ಪ್ರವಾಸವನ್ನು ಸರ್ಕಾರ ಆಯೋಜಿಸಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ವತಿಯಿಂದ ಈ ಪ್ರವಾಸವನ್ನು ಆಯೋಜಿಸಲಾಗಿದ್ದು, 2022-23 ನೇ ಸಾಲಿನ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮುಂದಿನ ಅಕ್ಟೋಬರ್‍ನಲ್ಲಿ ಈ ಪ್ರವಾಸ ಆಯೋಜಿಸಲಾಗುತ್ತಿದೆ.

ಕೋವಿಡ್‍ನಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಪ್ರವಾಸವನ್ನು ಮತ್ತೆ ಆರಂಭಿಸಲಾಗಿದೆ. ಪ್ರತಿ ತಾಲೂಕಿನಿಂದ ನಾಲ್ಕು ದಿನಗಳ ಪ್ರವಾಸಕ್ಕೆ ಒಂದು ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, 50 ವಿದ್ಯಾರ್ಥಿಗಳು ಮತ್ತು ಅವರ ಜೊತೆ ಇಬ್ಬರು ಶಿಕ್ಷಕರು, ಅಧಿಕಾರಿಗಳು, ಡ್ರೈವರ್, ಗೈಡ್ ಸೇರಿ 55 ಜನರಿಗೆ ಅವಕಾಶ ನೀಡಲಾಗಿದೆ.

ಎಂಟನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಉಚಿತ ಪ್ರವಾಸ ಯೋಜನೆ ಲಭ್ಯವಾಗುವುದಿಲ್ಲ. ಸೀಮಿತ ಸಂಖ್ಯೆಯ ಮಕ್ಕಳಿಗೆ ಮಾತ್ರ ಅವಕಾಶ ದೊರೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಸುಮಾರು 200ರಿಂದ 300 ಮಕ್ಕಳನ್ನು ಮಾತ್ರ ಆಯ್ಕೆ ಮಾಡಲು ಸೂಚಿಸಲಾಗಿದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ, ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಅವಕಾಶ ನೀಡಬೇಕು. 7ನೇ ತರಗತಿಯಲ್ಲಿ ಎ+, ಎ ಗ್ರೇಡ್ ಪಡೆದವರನ್ನು ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಓದುತ್ತಿರುವ ಎಸ್‍ಸಿ, ಎಸ್‍ಟಿ ಮಕ್ಕಳನ್ನೂ ಸೇರಿಸಿ ಪಟ್ಟಿ ತಯಾರಿಸಬೇಕು ಎಂದು ಸೂಚಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪರಿಪೂರ್ಣವಾಗಿ ಸ್ಥಳೀಯ ವೈಜ್ಞಾನಿಕ, ಧಾರ್ಮಿಕ, ಭೌಗೋಳಿಕ, ನೈಸರ್ಗಿಕ, ಐತಿಹಾಸಿಕ, ವಿಜ್ಞಾನ ಮತ್ತು ಕೈಗಾರಿಕೆಗಳು, ಉತ್ತಮ ಶಾಲೆ, ಆಕಾಶವಾಣಿ ಕೇಂದ್ರ, ಗಣಿಗಳು, ಉದ್ಯಾನವನ, ಮ್ಯೂಸಿಯಂ, ಪ್ರಖ್ಯಾತ ವ್ಯಕ್ತಿಗಳು ಹುಟ್ಟಿದ ಊರುಗಳು ಇತ್ಯಾದಿ ಸೇರಿದಂತೆ ಜಿಲ್ಲೆಯ ಮುಖ್ಯವಾದ ಸ್ಥಳಗಳ ಬಗ್ಗೆ ಅರಿವು ಮೂಡಿಸುವುದು ಕರ್ನಾಟಕ ದರ್ಶನ ಪ್ರವಾಸದ ಉದೇಶವಾಗಿದೆ.

ಮಕ್ಕಳಲ್ಲಿ ಶೈಕ್ಷಣಿಕ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ.

Articles You Might Like

Share This Article