ನವದೆಹಲಿ, ಜು.11- ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮುಂದುವರಿಸದಂತೆ ಹೊಸದಾಗಿ ಚುನಾಯಿತರಾಗಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‍ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಕಪಿಲ್ ಸಿಬಲ್ ನೇತೃತ್ವದ ಹಿರಿಯ ವಕೀಲರು ಉದ್ಧವ್ ಬಣದ ಪರವಾಗಿ ಮಂಡಿಸಿದ ವಾದವನ್ನು ಆಲಿಸಿದರು.
ಇಲ್ಲಿ ವಿಷಯ ಇತ್ಯರ್ಥ ವಾಗುವವರೆಗೂ ಅನರ್ಹತೆಯ ಅರ್ಜಿಯ ಮೇಲೆ ಯಾವುದೇ ತೀರ್ಮಾನ ನೀಡದಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಅವರಿಗೆ ಸ್ಪಷ್ಟ ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿಂತೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಇಂದು ಪಟ್ಟಿ ಮಾಡಲಾಗುವುದು. ಈ ವಿಷಯ ಇಲ್ಲಿ ನಿರ್ಧರಿಸುವವರೆಗೆ ಅನರ್ಹತೆ ಕುರಿತು ತೀರ್ಮಾನ ತೆಗೆದು ಕೊಳ್ಳಬಾರದು ಎಂದು ಸಿಬಲ್ ವಾದಿಸಿದರು.
ಈ ಹಿಂದೆ ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ಆಧರಿಸಿ ಅವರಿಗೆ ಈ ನ್ಯಾಯಾಲಯ ರಕ್ಷಣೆ ನೀಡಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಿವಸೇನೆಯ ಶಾಸಕರ ವಿರುದ್ಧವೇ ಅನರ್ಹತೆಯ ಅರ್ಜಿ ಸಲ್ಲಿಸಲಾಗಿದೆ ಎಂದರು. ರಾಜ್ಯಪಾಲರ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚನೆ ನೀಡಿದ ಪೀಠ ನಾವು ಅರ್ಜಿಗಳನ್ನು ಪರಿಶೀಲಿಸುತ್ತೇವೆ ಮತ್ತು ವಿಚಾರಣೆ ನಡೆಸುತ್ತೇವೆ. ಆವರೆಗೂ ಅನರ್ಹತೆ ಕುರಿತು ಯಾವುದೇ ವಿಚಾರಣೆ ನಡೆಸದಂತೆ ಸ್ಪೀಕರ್ ಅವರಿಗೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ.
ಶಿವಸೇನೆಯ ಠಾಕ್ರೆ ನೇತೃತ್ವದ ಬಣ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ, ಜುಲೈ 3 ಮತ್ತು 4 ರಂದು ನಡೆದ ವಿಧಾನಸಭೆ ಕಲಾಪಗಳ ಸಿಂಧುತ್ವವನ್ನು ಪ್ರಶ್ನಿಸಿದೆ. 3ರಂದು ವಿಧಾನಸಭೆಯ ಹೊಸ ಸ್ಪೀಕರ್ ಚುನಾವಣೆ ನಡೆದಿದೆ. 4 ರಂದು ಶಿಂಧೆ ನೇತೃತ್ವದ ಸರ್ಕಾರದಲ್ಲಿ ವಿಶ್ವಾಸ ಮತ ಯಾಚನೆ ನಡೆದಿದೆ.
ಈ ಮೊದಲು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ವಿಪ್ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಶಿವಸೇನೆ 14 ಮಂದಿ ಶಾಸಕರ ವಿರುದ್ಧ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ ಅವರಿಗೆ ದೂರು ನೀಡಿತ್ತು. ಆ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಡೆಪ್ಯೂಟಿ ಸ್ಪೀಕರ್ ಪಕ್ಷಾಂತರ ನಿಷೇಧ ಕಾಯ್ದೆ ಆಧರಿಸಿ ಕ್ರಮ ಜರುಗಿಸಲು ಪ್ರಕ್ರಿಯೆ ಆರಂಭಿಸಿದ್ದರು.
ಗುಹವಾಟಿಯಲ್ಲಿದ್ದ ಬಂಡಾಯ ಶಾಸಕರಿಗೆ ನೋಟಿಸ್ ನೀಡಿ, ಜೂ.27ರ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದರು. ನೋಟಿಸ್ ಪ್ರಶ್ನಿಸಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ನೋಟಿಸ್‍ಗೆ ಉತ್ತರ ನೀಡಲು ಜೂ.27ರ ಬದಲು ಜುಲೈ 11ರವರೆಗೆ ಕಾಲಾವಕಾಶ ನೀಡಿತ್ತು. ಇಂದು ಮತ್ತೆ ವಿಚಾರಣೆ ನಡೆಯುವ ವೇಳೆಗೆ ಮಹಾರಾಷ್ಟ್ರದಲ್ಲಿ ರಾಜಕೀಯ ಪರಿಸ್ಥಿತಿಗಳು ಬದಲಾಗಿದ್ದು, ಸ್ಪೀಕರ್ ಬದಲಾವಣೆಯಾಗಿದೆ. ಶಿವಸೇನೆಯ ಶಾಸಕರ ವಿರುದ್ಧವೇ ದೂರು ಸಲ್ಲಿಸಲಾಗಿದೆ.