ಪರಿಶಿಷ್ಟ ಪಂಗಡಕ್ಕೆ ಶೇ.5 ರಷ್ಟು ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು

Spread the love

ಬೆಂಗಳೂರು, ಜು.2- ಪರಿಶಿಷ್ಟ ಪಂಗಡ ( ಎಸ್‍ಟಿ)ದವರಿಗೆ ಪ್ರಸ್ತುತ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಿ, ಶೇ.5ರಷ್ಟು ಮೀಸಲಾತಿ ನೀಡುವಂತೆ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಪರಿಶಿಷ್ಟ ಪಂಗಡದವರಿಗೆ ಶೇ.4ರಷ್ಟು ಮೀಸಲಾತಿ ಹೆಚ್ಚಿಸುವ ಸಂಬಂಧ (ಸದ್ಯ ಪರಿಶಿಷ್ಟ ಜಾತಿಯವರಿಗೆ ಶೇ.15, ಪರಿಶಿಷ್ಟ ಪಂಗಡದವರಿಗೆ ಶೇ.3ರಷ್ಟು ಮೀಸಲಾತಿ ಇದೆ) ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದಲ್ಲಿ ಸರ್ಕಾರ ಕಳೆದ ನವೆಂಬರ್ ತಿಂಗಳಿನಲ್ಲಿ ಆಯೋಗ ರಚನೆ ಮಾಡಿತ್ತು.

ಸತತ ಒಂಬತ್ತು ತಿಂಗಳು ಅಧಿಕ ಕಾಲ ಸಮಗ್ರ ಅಧ್ಯಯನ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿಯಾಗಿ ವರದಿಯನ್ನು ಹಸ್ತಾಂತರ ಮಾಡಿತು.

ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯಾಗನುಗುಣವಾಗಿ ಶೇ.5ರಷ್ಟು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕು. ಉದ್ಯೋಗ ಹಾಗೂ ಶಿಕ್ಷಣದಲ್ಲಿ ಈಗ ನೀಡುತ್ತಿರುವ ಪ್ರಮಾಣವನ್ನು ಏರಿಕೆ ಮಾಡಬೇಕಾದ ಅಗತ್ಯವಿದೆ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಅಧಿಕೃತವಾಗಿ ಎಚ್.ಎನ್. ನಾಗಮೋಹನ್ ದಾಸ್ ಅವರು, ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಕೊಟ್ಟಿಲ್ಲವಾದರೂ, ಮೀಸಲಾತಿ ಏರಿಕೆ ಅಗತ್ಯವಾಗಿದೆ ಎಂಬ ಅಭಿಪ್ರಾಯವನ್ನು ಉಲ್ಲೇಖ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಶೇ.50ರಷ್ಟು ಮೀಸಲಾತಿ ಹಂಚಿಕೆಯನ್ನು ರಾಜ್ಯ ಸರ್ಕಾರ ಈಗಾಗಲೇ ಮಾಡಿದೆ. ಮೀಸಲಾತಿ ಪ್ರಮಾಣ ಶೇ.50ರಷ್ಟನ್ನು ಮೀರಬಾರದು ಎಂಬ ಸುಪ್ರೀಂಕೋರ್ಟ್ ಆದೇಶ ಇದೆ. ಇದನ್ನು ಮೀರಿ ಮೀಸಲಾತಿ ಹೆಚ್ಚಳ ಹೇಗೆ ಮಾಡಬೇಕು ಎಂಬುದು ಆಯೋಗಕ್ಕೆ ದೊಡ್ಡ ಸವಾಲಾಗಿತ್ತು.

ಈ ಹಿನ್ನೆಲೆಯಲ್ಲಿಯೇ ಕಾನೂನು ತಜ್ಞರಿಂದ ಸಂಶೋಧನೆಗಳನ್ನು ಆಯೋಗ ಮಾಡಿಸಿದೆ. ಹಿಂದುಳಿದ ವರ್ಗಗಳ ಬುಟ್ಟಿಗೆ ಕೈ ಹಾಕದೆ ಮೀಸಲಾತಿ ಹೆಚ್ಚಳ ಹೇಗೆ ಮಾಡುಬಹುದು ಎಂಬ ಶಿಫಾರಸುಗಳನ್ನು ಆಯೋಗ ಮಾಡಿದೆ ಎಂದು ಗೊತ್ತಾಗಿದೆ.

ಇದರಲ್ಲಿ ಮುಖ್ಯವಾಗಿ ಕಾನೂನು ತಜ್ಞರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚಿಂತಕರು ಹಾಗೂ ಸಮುದಾಯಗಳಿಗೆ ಸೇವೆ ಸಲ್ಲಿಸಿರುವ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಜನಸಂಖ್ಯೆ ಹೆಚ್ಚಳವಾಗಿರುವುದು ಒಂದು ಅಂಶ. ಅದನ್ನು ಹೊರತಾಗಿ ಶೈಕ್ಷಣಿಕ, ಕಾನೂನು, ಉದ್ಯೋಗ, ಮಾನವ ಅಭಿವೃದ್ಧಿ ಪರಿಗಣಿಸಿ ಆ ಸಮುದಾಯದ ಸ್ಥಿತಿಗತಿಯನ್ನೂ ಅವಲೋಕಿಸಿ, ವರದಿಯಲ್ಲಿ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲು ಅಲ್ಲಿನ ಸರ್ಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ.

ಈ ಸಮುದಾಯಕ್ಕೆ ಶೇ.16ರಷ್ಟು ಮೀಸಲು ನಿಗದಿ ಮಾಡಿತ್ತು. ಇದೇ ಮಾದರಿ ಅನುಸರಿಸಿ ರಾಜ್ಯದಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಈಗ ಇರುವ ಶೇ.3 ರಿಂದ ಶೇ.5ಕ್ಕೆ ಹೆಚ್ಚಿಸಬಹುದು ಎಂಬ ಮಾತುಗಳು ಕೇಳಿ ಬಂದಿದೆ. 850 ಲಿಖಿತ ಅಹವಾಲು ಸ್ವೀಕರಿಸಲಾಗಿದೆ. 42 ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ವಿಭಾಗ ಮಟ್ಟದ ಸಮಾಲೋಚನಾ ಸಭೆಗಳನ್ನು ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

ಶಿಕ್ಷಣವೇ ದೊರಕದ ತಳ ಸಮುದಾಯದವರ ಹಿತವನ್ನೂ ಸರ್ಕಾರ ಹೇಗೆ ರಕ್ಷಿಸಬಹುದು ಎಂಬ ಸಲಹೆಗಳನ್ನೂ ಆಯೋಗ ನೀಡುವ ಸಾಧ್ಯತೆ ಇದೆ.ಕೊಳೆಗೇರಿ ನಿವಾಸಿಗಳು, ಸಫಾಯಿ ಕರ್ಮಚಾರಿಗಳು, ದೇವದಾಸಿ, ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಮಕ್ಕಳು ಮೀಸಲಾತಿ ಸೌಲಭ್ಯವನ್ನೇ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಕನಿಷ್ಠ ವಿದ್ಯಾರ್ಹತೆಯ ಹಂತಕ್ಕೂ ಆ ಸಮುದಾಯದ ಮಕ್ಕಳು ತಲುಪಿಲ್ಲ. ಅಂತವರನ್ನು ಮೇಲೆತ್ತಲು ಸರ್ಕಾರಗಳು ಏನು ಮಾಡಬೇಕು ಎಂಬ ಸಲಹೆಗಳನ್ನು ನೀಡಲು ಆಯೋಗ ಆಲೋಚಿಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ನ.4ರಿಂದ ಆಯೋಗದ ಚಟುವಟಿಕೆ ಆರಂಗೊಂಡಿತು. ಆದರೆ, ವರದಿ ಪ್ರಕ್ರಿಯೆ ಒಂದು ತಿಂಗಳ ಕಾಲಾವಕಾಶ ಮಾತ್ರ ನೀಡಲಾಗಿತ್ತು. ಬಳಿಕ, ಆಯೋಗದ ಪ್ರಮುಖರಾದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಮನವಿಯಂತೆ ಮೂರು ತಿಂಗಳ ಅವಕಾಶ ನೀಡಲಾಗಿತ್ತು.

ಪರಿಶಿಷ್ಟ ಪಂಗಡದಲ್ಲಿರುವ ನಾಯಕ ಸಮುದಾಯದ ಜನಪ್ರತಿನಿಧಿಗಳು ಮತ್ತು ಕರ್ನಾಟಕ ನಾಯಕ ಸ್ಟೂಡೆಂಟ್ ಫೆಡರೇಷನ್ ಇವರುಗಳಿಗೆ ಪರಿಶಿಷ್ಟ ಪಂಗಡ ಜನಸಂಖ್ಯೆ 2011ರ ಜನಗಣತಿಯಂತೆ ಶೇ.6.95ರಷ್ಟು ಮೀಸಲಾತಿ ಇದೆ.

ಆದರೆ, ಶಿಕ್ಷಣ ಮತ್ತು ಸರ್ಕಾರಿ/ ಸಾರ್ವಜನಿಕ ಉದ್ಯೋಗಗಳಿಗೆ ಪ್ರಸ್ತುತ ಕೇವಲ ಶೇ.3 ಮೀಸಲಾತಿ ಇರುವುದರಿಂದ, ಈ ಜನಾಂಗ ಶಿಕ್ಷಣ ಮತ್ತು ಸರ್ಕಾರಿ/ಸಾರ್ವಜನಿಕ ಉದ್ಯೋಗಗಳಿಂದ ವಂಚಿತರಾಗಿ ಅನ್ಯಾಯಕ್ಕೆ ಒಳಗಾಗಿರುವುದರಿಂದ, ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧಾರದ ಮೇಲೆಹೆಚ್ಚಿಸಬೇಕೆಂದು ಒತ್ತಾಯ ಮಾಡಿದ್ದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಅಧ್ಯಕ್ಷರಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಕಳೆದ ವರ್ಷದ ಜೂನ್ 25ರಂದು ನಾಯಕ ಸಮಾಜದ ಮುಖಂಡರೊಂದಿಗೆ ಧರಣಿ ನಡೆಸಲಾಗಿತ್ತು.

ಉಪ ಮುಖ್ಯಮಂತ್ರಿಗಳು, ಸಮಾಜಕಲ್ಯಾಣ ಸಚಿವರು ಹಾಗೂ ಅರಣ್ಯ ಸಚಿವರು ಧರಣಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಸಮುದಾಯದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಸರ್ಕಾರಕ್ಕೆ ಸಲ್ಲಿಸಲಾಗಿರುವ ಬೇಡಿಕೆಗಳನ್ನು ಪರಿಶೀಲಿಸಿ, ಸಮಗ್ರ ಅಧ್ಯಯನ ನಡೆಸಿ, ವರದಿ ನೀಡುವ ಸಲುವಾಗಿ ಸರ್ಕಾರ ಪರಿಶೀಲನಾ ಆಯೋಗವನ್ನು ರಚಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಪರಿಷ್ಕರಣೆ ವಿಷಯ ಪ್ರಸ್ತಾವವಾಗಿತ್ತು. ಸಮಿತಿ ರಚಿಸಬೇಕೋ ಅಥವಾ ಆಯೋಗ ರಚಿಸಬೇಕೋ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಪರಿಶಿಷ್ಟ ಪಂಗಡದ ಶಾಸಕರಿಂದಲೂ ಒತ್ತಡ ಹೆಚ್ಚಾಗಿದ್ದರಿಂದ ಈ ಬಗ್ಗೆ ಆಯೋಗ ರಚಿಸುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿತ್ತು.

Facebook Comments