ಬೆಂಗಳೂರು, ಜು. 21- ನಗರದಲ್ಲಿನ ಶಾಲಾ, ಕಾಲೇಜುಗಳ ವಾಹನಗಳು ಸೇರಿದಂತೆ ಮಕ್ಕಳನ್ನು ಬಿಡಲು ಆಗಮಿಸುವ ಪೋಷಕರಿಂದಲೂ ಸಂಚಾರ ದಟ್ಟಣೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿದ್ರೆ ಸೀಜ್ ಮಾಡಿ ಕಾನೂನು ಕ್ರಮಕೈಗೊಳ್ಳುವುದಾಗಿ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯರಸ್ತೆಗಳಲ್ಲಿಯೇ ಶಾಲಾ, ಕಾಲೇಜುಗಳ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸಂಚಾರಿ ಪೊಲೀಸರು ಖಾಸಗಿ ಶಾಲೆಗಳಿಗೆ ಎಚ್ಚರಿಸಿದ್ದಾರೆ.
ಶಾಲಾ, ಕಾಲೇಜುಗಳು ಸಂಚಾರಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ನೋಟಿಸ್ ನೀಡಲಾಗುವುದು, ಎಲ್ಲಾ ಶಾಲೆಗಳ ಬಳಿ ಸಂಚಾರಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಅಸಾಧ್ಯವಾಗಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಶಾಲೆಗಳ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕೆಂದು ಸಲಹೆ ನೀಡಲಾಗಿದೆ.
ಸೆಕ್ಯುರಿಟಿ ಗಾರ್ಡ್‍ಗಳನ್ನೇ ಟ್ರಾಫಿಕ್ ನಿಯಂತ್ರಣಕ್ಕೆ ನೇಮಿಸಿಕೊಳ್ಳಬೇಕು, ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಅಂತಹ ಸೆಕ್ಯುರಿಟಿ ಗಾರ್ಡ್‍ಗಳಿಗೆ ತರಬೇತಿ ನೀಡಲು ಸಿದ್ಧವಿದ್ದಾರೆ. ಈಗಾಗಲೇ ಅದಕ್ಕೆ ಬೇಕಾಗುವ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಎಲ್ಲಾ ಶಾಲೆಗಳು ಈ ನಿಯಮಗಳನ್ನು ಪಾಲಿಸಲೇಬೇಕಿದೆ.
ಶಾಲಾ ವಾಹನಗಳನ್ನು ಆಯಾ ಶಾಲೆಯ ಪಾರ್ಕಿಂಗ್ ಜಾಗದಲ್ಲೇ ನಿಲುಗಡೆ ಮಾಡಬೇಕು, ರಸ್ತೆಯಲ್ಲಿ ನಿಲ್ಲಿಸಿದ್ರೆ ಅವುಗಳನ್ನು ಸೀಜ್ ಮಾಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.