ಶಾಲಾ-ಕಾಲೇಜು ಆವರಣದಲ್ಲಿ ಹಿಜಾಬ್-ಕೇಸರಿ ಶಾಲು ಧರಿಸುವುದು ತಪ್ಪು : ಸಚಿವ ಅಶೋಕ್

Social Share

ಬೆಂಗಳೂರು, ಫೆ.9- ಶಾಲಾ-ಕಾಲೇಜು ಆವರಣದಲ್ಲಿ ಹಿಜಾಬ್, ಕೇಸರಿ ಶಾಲು ಎರಡೂ ಧರಿಸುವುದು ತಪ್ಪು. ಹಾಗೆಯೇ ರಾಷ್ಟ್ರಧ್ವಜ ಇಳಿಸುವುದು, ಖಾಲಿ ಕಂಬದಲ್ಲಿ ಕೇಸರಿ ಧ್ವಜ ಹಾರಿಸುವುದು ಕೂಡ ತಪ್ಪು. ಇದನ್ನು ಯಾರೂ ಕೂಡ ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಹಿಜಾಬ್ ವಿಚಾರವಾಗಿ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಶಾಲಾ-ಕಾಲೇಜು ಆವರಣದಲ್ಲಿ ನಿಗದಿತ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು. ಇದರ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ. ಕಾಂಗ್ರೆಸ್‍ನಲ್ಲಿ ಎರಡು ವರ್ಗವಿದ್ದು, ಒಂದು ವರ್ಗ ಪ್ರೇರಣೆ ಮಾಡುತ್ತಿದ್ದರೆ ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತಿದೆ ಎಂದು ಟೀಕಿಸಿದರು.
ಕೇಸರಿ ಶಾಲು, ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಸರ್ಕಾರ ಘಟನೆಯನ್ನು ನಿಭಾಯಿಸುವಲ್ಲಿ ವಿಫಲವಾಗಿಲ್ಲ. ಹಿಜಾಬ್ ಕುರಿತ ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸಲಾಗುತ್ತಿದೆ. ಸರ್ಕಾರದ ಆದೇಶ ಧಿಕ್ಕರಿಸುವುದು ಸರಿಯಲ್ಲ. ಅದಕ್ಕೆ ಕಾಂಗ್ರೆಸ್ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ಗೆ ಏನು ಬೇಕೋ ಅದನ್ನು ಹೇಳುತ್ತಾರೆ. ರಾಷ್ಟ್ರಧ್ವಜವನ್ನು ಇಳಿಸಿಲ್ಲ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಆದರೂ ಡಿ.ಕೆ.ಶಿವಕುಮಾರ್ ಆಧಾರ ರಹಿತ ಹೇಳಿಕೆ ನೀಡುತ್ತಾರೆ ಎಂದು ಆರೋಪಿಸಿದರು.

Articles You Might Like

Share This Article