ಶಾಲಾ-ಕಾಲೇಜು ತೆರೆಯುವ ಬಗ್ಗೆ ಸರ್ಕಾರದಲ್ಲೇ ಗೊಂದಲ

Spread the love

ಬೆಂಗಳೂರು, ಜೂ.25- ಹೊಸ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡು ಹಲವು ದಿನ ಕಳೆಯುತ್ತಾ ಬಂದರೂ, ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯುವ ಬಗ್ಗೆ ಸರ್ಕಾರವೇ ಗೊಂದಲಕ್ಕೆ ಸಿಲುಕಿದೆ. ಇದೀಗ ರಾಜ್ಯದಲ್ಲಿ ಕೊರೋನಾ ರೂಪಾಂತರ ಡೆಲ್ಟಾ ವೈರಸ್ ಹರಡುವ ಭೀತಿ ಶುರುವಾಗಿದೆ. ಮತ್ತೊಂದೆಡೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕವೃಂದಕ್ಕೆ ಲಸಿಕೆ ನೀಡಿದ ನಂತರವೇ ಶಾಲಾ -ಕಾಲೇಜು ಆರಂಭಿಸಿ ಅಂತ ಕೋವಿಡ್ 19 ನಿಯಂತ್ರಣಕ್ಕೆ ರಚಿಸಲ್ಪಟ್ಟ ತಾಂತ್ರಿಕ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದು ಸರ್ಕಾರವನ್ನು ಇಕ್ಕಟ್ಟಿಗೆ ತಂದು ನಿಲ್ಲಿಸಿದೆ.

ಈಗಾಗಲೇ 2021-22 ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಅಧಿಕೃತವಾಗಿಯೇ ಆರಂಭಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಜುಲೈ 1 ರಿಂದ ಶಾಲಾ-ಕಾಲೇಜುಗಳನ್ನು ಭೌತಿಕವಾಗಿ ಶುರು ಮಾಡಲು ಬಗ್ಗೆ ಮಾಹಿತಿ ನೀಡಿದೆ. ಅದೇ ನಿಟ್ಟಿನಲ್ಲಿ ಜೂನ್ 15 ರಿಂದಲೇ ಪ್ರವೇಶ ಪ್ರಕ್ರಿಯೆ ಸೇರಿದಂತೆ ಶಾಲಾ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ತನ್ನ ಸಿಬ್ಬಂದಿಗೆ ಸೂಚಿಸಿದೆ. ಈ ಸಂಬಂಧ ಸರ್ಕಾರದಿಂದಲೇ ಅಧಿಕೃತ ಆದೇಶ ಕೂಡ ರವಾನೆ ಆಗಿದೆ. ಆದರೆ ಇಲಾಖೆ ನಿರ್ಧರಿಸಿದಂತೆ ಜುಲೈ 1ರಿಂದ ಶಾಲಾ-ಕಾಲೇಜುಗಳು ಆರಂಭವಾಗುವುದು ನಿಶ್ಚಿತವಾದರೂ ವಾಸ್ತವದಲ್ಲಿ ಅದು ಅಷ್ಟು ಸುಲಭ ಇಲ್ಲ.

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಿಸುವ ಕುರಿತು ಈಗ ಕೋವಿಡ್ 19 ನಿಯಂತ್ರಣಕ್ಕೆ ರಚಿಸಲ್ಪಟ್ಟ ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ಮೊನ್ನೆ ಯಷ್ಟೇ ತನ್ನ ಮಧ್ಯಂತರ ವರದಿಯಲ್ಲಿ ಕೆಲವು ಶಿಫಾರಸ್ಸು ಮಾಡಿದೆ. ಕೊರೋನಾ ಹರಡುವ ಭೀತಿ ಈಗಲೂ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದಕ್ಕೆ ಕೋವಿಡ್ ಲಸಿಕೆ ನೀಡಿದ ನಂತರವೇ ಶಾಲಾ-ಕಾಲೇಜು ಆರಂಭಿಸಲು ಸರ್ಕಾರ ಚಿಂತನೆ ನಡೆಸಬಹುದು ಅಂತ ಸಲಹೆ ನೀಡಿದೆ. ಆ ಪ್ರಕಾರ ಸರ್ಕಾರ ಈಗ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿಗೆ ಮೊದಲು ಲಸಿಕೆ ನೀಡಬೇಕಿದೆ.

ಈಗ ಸರ್ಕಾರವು 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ನಂತರವೇ ಕಾಲೇಜುಗಳನ್ನ ಆರಂಭಿಸೋಣ ಎನ್ನುವ ಚಿಂತನೆ ನಡೆಸಿದೆ. ಹದಿನೆಂಟು ವರ್ಷ ದಾಟಿದ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಆದ್ಯತೆ ಮೇಲೆ ಕೋವಿಡ್ ಲಸಿಕೆ ನೀಡಿದ ನಂತರವೇ ರಾಜ್ಯಾದ್ಯಂತ ಕಾಲೇಜುಗಳಲ್ಲಿ ನೇರ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕೋವಿಡ್ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಆಶ್ವತ್ಥ್ ನಾರಾಯಣ ನಿನ್ನೆ ಹೇಳಿದ್ದರು.

ಸದ್ಯಕ್ಕೆ ಕಾಲೇಜುಗಳ ಆರಂಭದ ದಿನ ಯಾವಾಗ ಎನ್ನುವುದು ಅನಿಶ್ವಿತೆತಯಲ್ಲಿದ್ದರೂ, ಆ ನಿಟ್ಟಿನಲ್ಲಿ ಸಿದ್ದತೆಯಂತೂ ಶುರುವಾಗಿದೆ. ಇಂದಲ್ಲ ನಾಳೆ ಕಾಲೇಜುಗಳು ಆರಂಭಗೊಳ್ಳಬಹುದು, ಆದರೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಆರಂಭದ ಕಥೆಯೇನು?

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಭೌತಿಕವಾಗಿ ತೆರೆಯುವ ಮಾತು ಬಹು ದೂರವಿದೆ. ಯಾಕೆಂದರೆ ಭವಿಷ್ಯದ ಪರಿಸ್ಥಿತಿ ಶೋಚನೀಯವಾಗಿದೆ. ಕೊರೋನಾ ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಾಗಿ ಮಕ್ಕಳಿಗೇ ತಗಲುವ ಸಾಧ್ಯತೆ ಇದೆ ಎಂದು ಈಗಾಗಲೇ ಸಾಕಷ್ಟು ತಜ್ಜರು ಹೇಳಿದ್ದಾರೆ. ಹಾಗಾಗಿ ಮಕ್ಕಳನ್ನು ಸಂರಕ್ಷಣೆ ಮಾಡುವುದಕ್ಕೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂಬುದಾಗಿಯೂ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ರಚಿಸಲ್ಪಟ್ಟ ತಾಂತ್ರಿಕ ಸಮಿತಿ ಸಲಹೆ ನೀಡಿದೆ.

ಈ ಮಧ್ಯೆ ಕೊರೋನಾ ರೂಪಾಂತರದ ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ವರದಿ ಆಗುತ್ತಿದೆ. ಅದು ವೇಗವಾಗಿ ಹರಡುವ ಭೀತಿಯೂ ಇದೆ. ಇನ್ನು ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಪ್ರಯೋಗ ಕೂಡ ಈಗಲೂ ಪ್ರಾಯೋಗಿಕ ಹಂತದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಶಾಲೆಗಳು ಭೌತಿಕ ಶುರುವಾಗುವುದಾದರೂ ಯಾವಾಗ ?

ಕೈ ಮಿರೀದ ಪರಿಸ್ಥಿತಿಗಳ ನಡುವೆ ಈಗಾಗಲೇ ಒಂದು ವರ್ಷದ ಶೈಕ್ಷಣಿಕ ವರ್ಷ ಭೌತಿಕ ತರಗತಿಗಳಿಲ್ಲದೆ ಕಳೆದು ಹೋಗಿದೆ. ಈ ವರ್ಷವೂ ಕೂಡ ಹೀಗೆಯೇ ಕಳೆದು ಹೋಗುತ್ತಾ ಎನ್ನುವ ಆತಂಕ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡುತ್ತಿದ್ದರೆ, ವಿದ್ಯಾರ್ಥಿಗಳಿಂದ ವಸೂಲಾಗುತ್ತಿದ್ದ ಶುಲ್ಕದಿಂದಲೇ ನಡೆಯುತ್ತಿದ್ದ ಖಾಸಗಿ ಶಾಲೆಗಳ ಸಿಬ್ಬಂದಿ ಕಂಗಲಾಗಿದ್ದಾರೆ.
ಆನ್ ಲೈನ್ ಮತ್ತು ಆಪ್ ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದರೂ, ಶಾಲೆಗಳನ್ನು ನಡೆಸುವುದೇ ಕಷ್ಟ ಆಗಿದೆ ಎನ್ನುವ ನೋವು ಅವರದ್ದು. ಮತ್ತೊಂದೆಡೆ ಶೈಕ್ಷಣಿಕ ಚಟುವಟಿಕೆಗಳೇ ಇಲ್ಲದೆ ಶಿಕ್ಷಣ ಇಲಾಖೆ ಕೂಡ ನೊಣ ಹೊಡೆಯುತ್ತಾ ಕುಳಿತಿದೆ.