ಬೆಂಗಳೂರು,ಫೆ.11- ಸೋಮವಾರದಿಂದ ರಾಜ್ಯಾದ್ಯಂತ 10ನೇ ತರಗತಿಗಳು ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಜೆ ಅಧಿಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಲಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ 6 ಗಂಟೆಗೆ ಸಿಎಂ ಬೊಮ್ಮಾಯಿ, ಗೃಹಸಚಿವ ಅರಗ ಜ್ಞಾನೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರುಗಳು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು , ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಕಳೆದ ಮೂರು ದಿನಗಳಿಂದ 10ನೇ ತರಗತಿಯಿಂದ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದರಿಂದ ರಜೆ ಘೋಷಿಸಲಾಗಿತ್ತು. ಇದೀಗ ಸೋಮವಾರದಿಂದ 10ನೇ ತರಗತಿವರೆಗಿನ ಶಾಲೆಗಳು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡುವುದು, ಶಾಂತಿ, ಸೌಹಾರ್ದತೆಯ ವಾತಾವರಣ ನಿರ್ಮಿಸುವುದು, ನ್ಯಾಯಾಲಯದ ಮೌಖಿಕ ಆದೇಶವನ್ನು ಪಾಲನೆ ಮಾಡುವಂತೆ ಸಿಎಂ ಸೂಚನೆ ನೀಡಲಿದ್ದಾರೆ.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಮಡಿಕೇರಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ, ತುಮಕೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಸುಮಾರು 55 ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ನಡುವೆ ಸಂಘರ್ಷ ಉಂಟಾಗಿತ್ತು.
ಈಗ ರಾಜ್ಯ ಹೈಕೋರ್ಟ್ ಮೌಖಿಕ ಆದೇಶ ನೀಡಿರುವಂತೆ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಸಂಕೇತಗಳನ್ನು ಬಳಸಬಾರದೆಂದು ಸೂಚನೆ ನೀಡಿತ್ತು. ಹೀಗಾಗಿ ಸೋಮವಾರ ಶಾಲೆಗಳು ಪ್ರಾರಂಭವಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಿದ್ದಾರೆ.
ಯಾವುದೇ ಕಾರಣಕ್ಕೂ ಶಿಕ್ಷಣ ಸಂಸ್ಥೆಗಳಲ್ಲಿ ಅಹಿತಕರ ಘಟನೆಗೆ ಅವಕಾಶ ಕೊಡಬಾರದು. ಹಿಜಾಬ್ ಧರಿಸುವುದಾಗಲಿ ಅಥವಾ ಕೇಸರಿ ಶಾಲು ಹಾಕಿಕೊಂಡು ಬಂದವರನ್ನು ಶಾಲೆಯ ಆವರಣದೊಳಗೆ ಒಳ ಬಿಡದೆ ದೂರದಿಂದಲೇ ಅವರನ್ನು ಹೊರಕಳಿಸುವಂತೆ ಸೂಚನೆ ಕೊಡುವರು.
ಶಾಲೆಯ ಸುತ್ತಮುತ್ತ ಈಗಾಗಲೇ 144 ಸೆಕ್ಷನ್ ವಿಸಿರುವುದರಿಂದ ಅಲ್ಲಿ ಯಾವುದೇ ಸಂಘಟನೆಗಳ ಮುಖಂಡರಾಗಲಿ ಇಲ್ಲವೇ ಪದಾಧಿಕಾರಿಗಳು ಬಾರದಂತೆ ನೋಡಿಕೊಳ್ಳುವುದು, ಹಿಜಾಬ್ ಇಲ್ಲವೇ ಕೇಸರಿ ಹಾಕಿಕೊಂಡು ಬಂದರೆ ಮುಲಾಜಿಲ್ಲದೆ ಹೊರ ಕಳುಹಿಸುವಂತೆ ತಿಳಿಸಲಿದ್ದಾರೆ.
ನ್ಯಾಯಾಲಯದ ಮೌಖಿಕ ಸೂಚನೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲನೆ ಮಾಡಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಸೂಚನೆ ಕೊಡಲಿದ್ದಾರೆ.
